ADVERTISEMENT

ಇಂಧನ ಇಲಾಖೆ: 2,975 ಹುದ್ದೆಗಳ ಭರ್ತಿ ಪ್ರಕ್ರಿಯೆ ಅಂತಿಮ ಹಂತಕ್ಕೆ

ಮುಂದಿನ ವಾರ ನೇಮಕಾತಿ ಆದೇಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 20:02 IST
Last Updated 3 ಡಿಸೆಂಬರ್ 2025, 20:02 IST
   

ಬೆಂಗಳೂರು: ಇಂಧನ ಇಲಾಖೆಯಲ್ಲಿನ 2,975 ಹುದ್ದೆಗಳ ಭರ್ತಿ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಪಿಟಿಸಿಎಲ್‌ನ 491 ಹುದ್ದೆಗಳಿಗೆ ಆಯ್ಕೆಯಾದವರ ಅಂತಿಮ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ಇದೇ 10, 11ರಂದು ನೇಮಕಾತಿ ಆದೇಶ ನೀಡಲಾಗುತ್ತದೆ.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್‌) 410 ಕಿರಿಯ ಸ್ಟೇಷನ್‌ ಪರಿಚಾರಕರು ಹಾಗೂ 81 ಕಿರಿಯ ಪವರ್‌ ಮ್ಯಾನ್‌ಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಅವರಿಗೆ ನೇಮಕಾತಿ ಆದೇಶ ನೀಡುವುದರ ಜೊತೆಗೆ, ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುತ್ತದೆ ಎಂದು ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

433 ಕಿರಿಯ ಸ್ಟೇಷನ್‌ ಪರಿಚಾರಕರು ಹಾಗೂ 90 ಕಿರಿಯ ಪವರ್‌ ಮ್ಯಾನ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಕೆಲವೊಂದು ಮೀಸಲಾತಿ ಪ್ರವರ್ಗದಡಿ ಅರ್ಹ ಅಭ್ಯರ್ಥಿಗಳು ಲಭ್ಯವಾಗಿಲ್ಲ. ಇದರಿಂದಾಗಿ 32 ಹುದ್ದೆಗಳನ್ನು ತುಂಬಲು ಸಾಧ್ಯವಾಗಿಲ್ಲ. ಅವುಗಳನ್ನು ಬ್ಯಾಕ್‌ಲಾಗ್‌ ಹುದ್ದೆಗಳು ಎಂದು ಪರಿಗಣಿಸಿ, ಮುಂದೆ ನಡೆಯುವ ನೇಮಕಾತಿ ವೇಳೆ ಭರ್ತಿ ಮಾಡಲಾಗುತ್ತದೆ.

ADVERTISEMENT

ಹುದ್ದೆಗಳ ಭರ್ತಿ ಸಂಬಂಧ 2024ರ ಅಕ್ಟೋಬರ್‌ನಲ್ಲಿ ಕೆಪಿಟಿಸಿಎಲ್‌ ಹಾಗೂ ಐದು ವಿದ್ಯುತ್‌ ಸರಬರಾಜು ಕಂಪನಿಗಳು ಅಧಿಸೂಚನೆ ಹೊರಡಿಸಿದ್ದವು. ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯಲ್ಲಿ (ಚೆಸ್ಕಾಂ) ಕಿರಿಯ ಪವರ್‌ ಮ್ಯಾನ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಈಗಾಗಲೇ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಜೆಸ್ಕಾಂ ಮತ್ತು ಚೆಸ್ಕಾಂನಲ್ಲಿ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ) ಮತ್ತು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯಲ್ಲಿ (ಹೆಸ್ಕಾಂ) ಅಂಗವಿಕಲ ಕೋಟಾದಡಿ ನೇಮಕಾತಿ ಬಯಸಿರುವ ಶ್ರವಣದೋಷವುಳ್ಳ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ನಡೆಸಲು ವೇಳಾಪಟ್ಟಿ ಸಿದ್ಧಪಡಿಸ
ಲಾಗಿದೆ. ಅದಕ್ಕೆ ಅನುಗುಣವಾಗಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿ
ಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.