ಬೆಂಗಳೂರು: ‘ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಇಲಾಖೆಯ ವಿವಿಧ ಕಚೇರಿಗಳಲ್ಲಿ ಇರುವ 532 ಪೌರ ಕಾರ್ಮಿಕರನ್ನು ಶೀಘ್ರವೇ ಕಾಯಂ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘವು ಮನವಿ ಸಲ್ಲಿಸಿದೆ. ಅವುಗಳನ್ನು ಇಲಾಖೆ ಮತ್ತು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ, ನಿಮಗೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
‘ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಮರುಜಾರಿ ಮಾಡಬೇಕು ಎಂದು ಸಂಘವು ಒತ್ತಾಯಿಸಿದೆ. ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಜಾರಿ ಮಾಡಿದ್ದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನಿನ್ನೂ ಚರ್ಚೆಗೆ ಎತ್ತಿಕೊಂಡಿಲ್ಲ. ಚರ್ಚೆಗೆ ಎತ್ತಿಕೊಂಡು, ಎಲ್ಲ ನೌಕರರಿಗೆ ಅನುಕೂಲವಾಗುವಂತಹ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
‘ವಿದ್ಯುತ್ ಪೂರೈಕೆ ಜಾಲದಿಂದ 500 ಮೀಟರ್‌ಗಿಂತಲೂ ಹೆಚ್ಚು ದೂರ ಇರುವ ಪಂಪ್‌ಸೆಟ್‌ಗಳಿಗೆ ಕುಸುಮ್–ಬಿ ಯೋಜನೆ ಅಡಿ ಸೌರವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಂತಹ 40,000 ಪಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರದ ಶೇ 50ರಷ್ಟು, ಕೇಂದ್ರ ಸರ್ಕಾರದ ಶೇ 30ರಷ್ಟು ಸೇರಿ ಒಟ್ಟು ಶೇ 80ರಷ್ಟು ಸಹಾಯಧನದಲ್ಲಿ ಸೌರ ಪಂಪಸೆಟ್ ಒದಗಿಸುವ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
‘ನಾನು 2000 ಇಸವಿಯಲ್ಲಿದ್ದೇನೆ’:
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯ ಇತಿಹಾಸದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು, ‘2005ರಲ್ಲಿ ಬೆಂಗಳೂರಿಗೆ ಮೊದಲ ಬಾರಿಗೆ ವಿದ್ಯುತ್ ಪೂರೈಕೆ ಮಾಡಲಾಯಿತು’ ಎಂದರು. ಅಲ್ಲೇ ವೇದಿಕೆಯಲ್ಲಿದ್ದವರು, ‘ಅದು 1905’ ಎಂದರು. ಆಗ ಸಿದ್ದರಾಮಯ್ಯ ಅವರು, ‘ನಾನು 2000ನೇ ಇಸವಿಯಲ್ಲಿದ್ದೇನೆ. ಅದಕ್ಕೆ ಹೀಗಾಯಿತು. ಬೆಂಗಳೂರಿಗೆ ಮೊದಲು ವಿದ್ಯುತ್ ಪೂರೈಕೆ ಆಗಿದ್ದು 1905ರಲ್ಲಿ’ ಎಂದು ಸರಿಪಡಿಸಿಕೊಂಡರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಮಕ್ಕಳನ್ನು, ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಘದ ವಜ್ರ ಮಹೋತ್ಸವ ಸ್ಮರಣ ಸಂಚಿಕೆಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ಖಾಸಗೀಕರಣಕ್ಕೆ ಒತ್ತಡವಿತ್ತು: ಡಿಕೆಶಿ
‘ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲಿ ನಾನೇ ಇಂಧನ ಸಚಿವನಾಗಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ದೆಹಲಿ ಮುಂಬೈ ಸೇರಿ ದೇಶದ ಹಲವು ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗೀಕರಣ ಮಾಡಲಾಯಿತು. ರಾಜ್ಯದ ಎಸ್ಕಾಂಗಳನ್ನೂ ಖಾಸಗೀಕರಣ ಮಾಡಬೇಕು ಎಂದು ನನ್ನ ಮೇಲೆ ತೀವ್ರ ಒತ್ತಡ ಬಂತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ‘ನಮ್ಮ ನೌಕರರು ಎಂಜಿನಿಯರ್‌ಗಳು ವ್ಯವಸ್ಥಾಪಕ ಮಂಡಳಿಯವರು ಬಹಳ ಶಕ್ತಿಶಾಲಿಯಾಗಿದ್ದು ಎಸ್ಕಾಂಗಳನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಖಾಸಗೀಕರಣದ ಅವಶ್ಯಕತೆ ಇಲ್ಲ ಎಂದು ಆಗ ಹೇಳಿದ್ದೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರು ಇರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದರು. ‘ಕಾಂಗ್ರೆಸ್‌ನ ಎಲ್ಲ ಸರ್ಕಾರಗಳೂ ನೌಕರರು ಮತ್ತು ಜನರ ಪರವಾಗಿಯೇ ತೀರ್ಮಾನ ತೆಗೆದುಕೊಂಡಿವೆ. ಹಿಂದಿನ ಅವಧಿಯಲ್ಲಿ ಲಂಚ ಪಡೆಯದೆಯೇ 24000 ಹುದ್ದೆಗಳಿಗೆ ಕಾಯಂ ನೇಮಕಾತಿ ನಡೆಸಿದ್ದೆವು’ ಎಂದರು.
ಪಂಪ್‌ಸೆಟ್‌ಗಳಿಗೆ ಹಗಲೂ ವಿದ್ಯುತ್ ನೀಡುವ ಗುರಿ: ಸಿಎಂ
‘ಕೃಷಿ ಪಂಪ್‌ಸೆಟ್‌ಗಳಿಗೆ ಈಗ ರಾತ್ರಿ ವೇಳೆ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಹಗಲಿನ ವೇಳೆ 7 ಗಂಟೆ ವಿದ್ಯುತ್ ಪೂರೈಸಬೇಕು ಎಂಬುದು ನಮ್ಮ ಗುರಿ. ಇದಕ್ಕಾಗಿ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ರಾಜ್ಯದಲ್ಲಿ ಈಗ 35000 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಕೆಲವೇ ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು 60000 ಮೆಗಾವಾಟ್‌ಗಳಿಗೆ ಹೆಚ್ಚಿಸುವ ಗುರಿ ಹಾಕಿಕೊಂಡಿದ್ದೇವೆ. ಅದನ್ನು ಸಾಧಿಸುತ್ತೇವೆ. ಆಗ ರೈತರಿಗೆ ಹಗಲಿನಲ್ಲೂ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.