ADVERTISEMENT

ಅನರ್ಹ ಶಾಸಕರನ್ನು ಗೆಲ್ಲಿಸಿ ಎನ್ನುವುದು ಮೂರ್ಖತನದ ಪರಮಾವಧಿ: ರಮೇಶ್ ಕುಮಾರ್

ಬಿಜೆಪಿ ವಿರುದ್ಧ ಕೆ.ಆರ್. ರಮೇಶ್‌ಕುಮಾರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 16:10 IST
Last Updated 27 ನವೆಂಬರ್ 2019, 16:10 IST
   

ಅಥಣಿ/ಕಾಗವಾಡ: ‘ಸುಪ್ರೀಂ ಕೋರ್ಟ್‌ ಕೂಡ ‘ಅನರ್ಹ ಶಾಸಕರು’ ಎಂದು ಹೇಳಿದ ನಂತರವೂ ಅವರನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸಿ ಆಯ್ಕೆ ಮಾಡಿ ಎಂದು ಜನರನ್ನು ಕೋರುವುದು ಮೂರ್ಖತನದ ಪರಮಾವಧಿ’ ಎಂದು ಕಾಂಗ್ರೆಸ್‌ ಮುಖಂಡ ಕೆ.ಆರ್. ರಮೇಶ್‌ಕುಮಾರ್‌ ಇಲ್ಲಿ ಬಿಜೆಪಿಯವರನ್ನು ಟೀಕಿಸಿದರು.

ಪಕ್ಷದ ಅಭ್ಯರ್ಥಿಗಳಾದ ಗಜಾನನ ಮಂಗಸೂಳಿ (ಅಥಣಿ) ಹಾಗೂ ಭರಮಗೌಡ ಕಾಗೆ (ಕಾಗವಾಡ) ಪರ ಬುಧವಾರ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ನಾನು ವಿಧಾನಸಭಾಧ್ಯಕ್ಷನಾಗಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. 17 ಶಾಸಕರ ಅನರ್ಹತೆ ಸಿಂಧುವಾಗಿದೆ. ನಾನು ಸಂವಿಧಾನಬದ್ಧವಾಗಿಯೇ ಅವರನ್ನು ಅನರ್ಹಗೊಳಿಸಿದ್ದೆ. ಆದರೂ ಅವರನ್ನು ಅರ್ಹರು ಎಂದು ವಾದಿಸುವವರನ್ನು ಮಾನಸಿಕ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಸೇರಿಸಬೇಕು. ಅನರ್ಹರ ತಲೆ ಸರಿ ಇಲ್ಲ. ಅವರನ್ನು ಒಳ್ಳೆಯ ವೈದ್ಯರಲ್ಲಿ ತೋರಿಸಬೇಕಾಗಿದೆ’ ಎಂದರು.

ADVERTISEMENT

‘ಅನರ್ಹ ಶಾಸಕರನ್ನು ಗೆಲ್ಲಿಸಿ ಎಂದು ಹೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಹಾಗೂ ಪಾವಿತ್ರ್ಯತೆ ಹಾಳು ಮಾಡುವ ಕಾರ್ಯವಾಗಿದೆ. ಸಂವಿಧಾನಕ್ಕೆ ಚ್ಯುತಿ ತರುವ ಕೆಲಸ ಯಾರಿಂದಲೂ ಆಗಬಾರದು. ಕಾನೂನು ಪ್ರಕಾರ ನಾನು ನಡೆದುಕೊಂಡಿದ್ದೇನೆ. ಇದರಲ್ಲಿ ಯಾರಿಗಾದರೂ ಮೋಸ ಮಾಡುವುದು ಎಲ್ಲಿಂದ ಬಂತು?’ ಎಂದು ಕೇಳಿದರು.

ಉಗಾರ ಖುರ್ದದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ‘ಅನರ್ಹ ಶಾಸಕರಿಗೆ ರಾಜ್ಯೋತ್ಸವ ಪ್ರಶಸ್ತಿ ಅಥವಾ ಭಾರತ ರತ್ನ ಕೊಡಿಸಬೇಕಿತ್ತಾ? ಶ್ರೀಮಂತ ಪಾಟೀಲಗೆ ವಿಧಾನಸೌಧದ ಒಳಗೆ ಬರುವ ಹಕ್ಕು, ಯೋಗ್ಯತೆ ಮತ್ತು ಅರ್ಹತೆ ಇಲ್ಲ. ಎಷ್ಟೇ ದುಬಾರಿ ಪಾದರಕ್ಷೆ ಇದ್ದರೂ ಅದನ್ನು ದೇವಸ್ಥಾನದ ಒಳಗೆ ಹಾಕಿಕೊಂಡು ಬರುವಂತಿಲ್ಲ. ಹಾಗೆಯೇ, ವಿಧಾನಸೌಧ ಒಂದು ದೇವಾಲಯ. ಪಾದರಕ್ಷೆ ಒಳಗೆ ಬರುವಂತಿಲ್ಲ, ಹೊರಗಡೆಯೇ ಇರಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಕಾಗವಾಡ ಕ್ಷೇತ್ರದ ಜನರು ನನ್ನ ಕಳಕಳಿ, ಮಾತಿನ ಅಂತರಾಳವನ್ನ ಅರ್ಥಮಾಡಿಕೊಳ್ಳಬೇಕು’ ಎಂದು ಕೋರಿದರು.‘ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಗಳನ್ನೆಲ್ಲಾ ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಲೆ ಸರಿ ಇದ್ದಂತಿಲ್ಲ’ ಎಂದು ದೂರಿದರು.ಮುಖಂಡರಾದ ಎಸ್.ಜಿ. ನಂಜಯ್ಯನಮಠ, ಅಶೋಕ ಪಟ್ಟಣ, ಕಾಂತಾ ನಾಯಿಕ, ಎಸ್.ಕೆ. ಬುಟಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.