ADVERTISEMENT

ಕೆಆರ್‌ಐಡಿಎಲ್‌: ₹50 ಕೋಟಿ ಅಕ್ರಮ, ತರಹೇವಾರಿ ಅವ್ಯವಹಾರಗಳ ದರ್ಬಾರು

ಮುಖ್ಯಮಂತ್ರಿಗಳ ನವ ನಗರೋತ್ಥಾನ

ಮಂಜುನಾಥ್ ಹೆಬ್ಬಾರ್‌
Published 14 ಅಕ್ಟೋಬರ್ 2020, 20:15 IST
Last Updated 14 ಅಕ್ಟೋಬರ್ 2020, 20:15 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ ಅಂದಾಜು ₹50 ಕೋಟಿ ಮೊತ್ತದ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಹಿಸಿರುವ ಬಿಬಿಎಂಪಿ ಅಧಿಕಾರಿಗಳು ಅಕ್ರಮ ಎಸಗಿರುವುದು ಪತ್ತೆಯಾಗಿದೆ.

ರಾಜಧಾನಿಯ ಸಮಗ್ರ ಅಭಿವೃದ್ಧಿಗಾಗಿ ನವ ನಗರೋತ್ಥಾನ ಯೋಜನೆಯಡಿ ₹8,343.87 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಅನೇಕ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸ
ಲಾಗಿದೆ. ನಿಗಮಕ್ಕೆ ವಹಿಸಿರುವ ಕಾಮಗಾರಿಗಳ ಪಟ್ಟಿಯನ್ನು ತುರ್ತಾಗಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಹಿಂದೆ ಸೂಚಿಸಿದ್ದರು. ಪಟ್ಟಿಯನ್ನು ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದರು. ಈ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ತರಹೇವಾರಿ ಅಕ್ರಮಗಳು ಬಯಲಿಗೆ ಬಂದಿವೆ.

‘ಈ ಅವ್ಯವಹಾರಗಳ ಬಗ್ಗೆ ವಿವರವಾದ ವರದಿ ಸಲ್ಲಿಸಬೇಕು. ಈ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ಗೆ ಸೂಚಿಸಿದ್ದಾರೆ.

ADVERTISEMENT

ಹಲವು ಕಾಮಗಾರಿಗಳನ್ನುಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ. ಆದರೆ, ಕೆಲವು ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಇದರಿಂದಾಗಿ, ಒಂದೇ ಯೋಜನೆಯನ್ನು ಎರಡು ಪ್ರಾಧಿಕಾರಗಳಿಂದ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗಿದೆ. ಒಬ್ಬರು ಕಾಮಗಾರಿಯನ್ನು ನಿರ್ವಹಿಸಿದ ಬಳಿಕ ಇನ್ನೊಬ್ಬರು ಅಕ್ರಮವಾಗಿ ಬಿಲ್‌ ಸಲ್ಲಿಸಿ ಹಣ ಪಡೆಯಲು ಅನುವು ಮಾಡಿಕೊಟ್ಟಂತೆ ಆಗಿದೆ. ಇಂತಹ ಮೂರು ಕಾಮಗಾರಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ರಾಕೇಶ್‌ ಸಿಂಗ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಅನುಮೋದನೆ ಪಡೆಯದೆಯೇ ಅಧಿಕಾರಿಗಳು ತಮ್ಮ ಹಂತದಲ್ಲೇ ₹23 ಕೋಟಿ ಮೊತ್ತದ 21 ಕಾಮಗಾರಿಗಳನ್ನು ಸೃಜಿಸಿ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಿದ್ದಾರೆ. ಇದು ಸಹ ಅಕ್ರಮ. ಕೊಳವೆಬಾವಿ ಕೊರೆಯುವುದು, ಅಶ್ವತ್ಥಕಟ್ಟೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿಯಂತಹ ಕಾಮಗಾರಿಗಳು ಇದರಲ್ಲಿ ಸೇರಿವೆ.

‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸದೆಯೇ ಬಿಲ್ ಪಾವತಿಸಿ ರಾಜ್ಯದ ಬೊಕ್ಕಸಕ್ಕೆ ₹250 ಕೋಟಿ ನಷ್ಟವನ್ನು ಬಿಬಿಎಂಪಿ ಅಧಿಕಾರಿಗಳು ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ಸಂಸದ ಡಿ.ಕೆ. ಸುರೇಶ್ ಅವರು ಲೋಕಾಯುಕ್ತಕ್ಕೆ ಇತ್ತೀಚೆಗೆ ದೂರು ನೀಡಿದ್ದರು. ಈ ಕಾಮಗಾರಿಗಳನ್ನು ಸಹ ನಿಗಮಕ್ಕೆ ವಹಿಸಲಾಗಿತ್ತು. ಅದರ ಬೆನ್ನಲ್ಲೇ, ಇನ್ನೊಂದು ಅಕ್ರಮ ಬಯಲಿಗೆ ಬಂದಿದೆ.

₹2ಕೋಟಿಗಿಂತ ಹೆಚ್ಚಿನ ಕಾಮಗಾರಿಯೂ ಕೆಆರ್‌ಐಡಿಎಲ್‌ಗೆ

ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಲ್ಲಿ ತುರ್ತು ಕಾಮಗಾರಿ
ಗಳನ್ನಷ್ಟೇ ಕೆಆರ್‌ಐಡಿಎಲ್‌ಗೆ ವಹಿಸಲು ಹಣಕಾಸು ಇಲಾಖೆ 2018ರಲ್ಲಿ ಅನುಮೋದನೆ ನೀಡಿತ್ತು. ₹2 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ನಿಗಮಕ್ಕೆ ನೀಡದಂತೆ ಸೂಚಿಸಿತ್ತು. ಅದರೆ, ಪಾಲಿಕೆ ಎಂಜಿನಿಯರ್‌ಗಳು ಒಟ್ಟು ₹20 ಕೋಟಿ ಮೊತ್ತದ ಆರು ಕಾಮಗಾರಿಗಳನ್ನು ನಿಗಮಕ್ಕೆ ವಹಿಸಿದ್ದಾರೆ. ಇದು ಅಕ್ರಮ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

ಮುಗಿದ ಕಾಮಗಾರಿಗೆ ಮತ್ತೆ ಟೆಂಡರ್‌

ರಾಜಾಜಿನಗರ ಹಾಗೂ ಚಾಮರಾಜಪೇಟೆಯಲ್ಲಿ ಪೂರ್ಣಗೊಂಡಿರುವ ₹11.30 ಕೋಟಿ ಮೊತ್ತದ ಕಾಮಗಾರಿಗಳಿಗೆ ಅಧಿಕಾರಿಗಳು ಮತ್ತೊಮ್ಮೆ ಟೆಂಡರ್‌ ಕರೆದಿದ್ದಾರೆ.

ಚಾಮರಾಜಪೇಟೆಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ಮತ್ತೆ ಟೆಂಡರ್‌ ಕರೆದಿರುವ ಬಗ್ಗೆ ಆಕ್ಷೇಪಿಸಿ ಶಾಸಕ ಜಮೀರ್ ಅಹಮದ್‌ ಖಾನ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಟೆಂಡರ್‌ ರದ್ದುಪಡಿಸಿ ಬೇರೆ ಕಾಮಗಾರಿಗೆ ಮರು ಟೆಂಡರ್ ಕರೆಯಬೇಕು ಎಂದು ಅವರು ಕೋರಿದ್ದಾರೆ.

ಮತ್ತೊಮ್ಮೆ ಟೆಂಡರ್‌ ಕರೆದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

ತುರ್ತು ಹೆಸರಲ್ಲಿ ಹಳೆ ಕಟ್ಟಡ ಅಭಿವೃದ್ಧಿ

‘ತುರ್ತು ಕಾಮಗಾರಿಗಳ ಹೆಸರಿನಲ್ಲಿ ಕಟ್ಟಡ ನಿರ್ಮಾಣ, ಹಳೆಯ ಕಟ್ಟಡಗಳ ಅಭಿವೃದ್ಧಿ, ಕಟ್ಟಡಗಳಿಗೆ ಹೆಚ್ಚುವರಿ ಮಹಡಿಗಳ ನಿರ್ಮಾಣ, ಜಿಮ್‌, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಉದ್ಯಾನ ಹಾಗೂ ಆಟದ ಮೈದಾನಗಳ ಅಭಿವೃದ್ಧಿ, ಉದ್ಯಾನಗಳ ಸುಂದರೀಕರಣದಂತಹ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಿರುವುದು ಸರಿಯಲ್ಲ’ ಎಂದು ರಾಕೇಶ್‌ ಸಿಂಗ್‌ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.