ಕೃಷ್ಣಬೈರೇಗೌಡ
ಬೆಂಗಳೂರು: ರಾಜ್ಯದ ಎಲ್ಲ ಪುರಸಭೆಗಳು ಮತ್ತು ಪಟ್ಟಣ ಪಂಚಾಯತ್‌ಗಳ 3 ಕಿ.ಮೀ ವ್ಯಾಪ್ತಿಯ ಅಂತರದಲ್ಲಿರುವ ಯಾವುದೇ ಭೂಮಿಯನ್ನು ಅರ್ಜಿ ನಮೂನೆ 50, 53 ಮತ್ತು 57ರ ಅಡಿ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರ ಗಮನ ಸೆಳೆಯುವ ಸೂಚನೆಯಡಿ ಪ್ರಶ್ನೆಗೆ ಉತ್ತರಿಸಿ ಅವರು ಈ ವಿಷಯ ತಿಳಿಸಿದರು. ಈ ಕಾಯ್ದೆ 40 ವರ್ಷಗಳ ಹಿಂದೆಯೇ ಆಗಿತ್ತು. 2021ರಲ್ಲಿ ಈ ಕುರಿತು ಮತ್ತೊಮ್ಮೆ ಸುತ್ತೋಲೆ ಹೊರಡಿಸಲಾಗಿತ್ತು ಎಂದರು.
ಹೀಗಾಗಿ ಯಾರಾದರೂ ಅರ್ಜಿ ಹಾಕಿದರೆ ಸಹಜವಾಗಿ ತಿರಸ್ಕೃತವಾಗುತ್ತದೆ. ಈ ಜಾಗಗಳಲ್ಲಿ ಯಾರಾದರೂ ಸಾಗುವಳಿ ಮಾಡುತ್ತಿದ್ದರೆ, ಒಕ್ಕಲೆಬ್ಬಿಸುವುದಿಲ್ಲ. ಒಂದು ವೇಳೆ ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭ ಬಂದಾಗ ಪರಿಹಾರವನ್ನು ಯಾವ ರೀತಿ ನೀಡಬೇಕು ಎಂಬ ವಿಚಾರವಾಗಿ ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧಪಕ್ಷದ ನಾಯಕ ಆರ್.ಅಶೋಕ ಅವರು, ‘ನಾನು ಹಿಂದೆ ಕಂದಾಯ ಸಚಿವನಾಗಿದ್ದೆ. ನಾನೇ ಆಗಲಿ, ಕೃಷ್ಣ ಬೈರೇಗೌಡರೇ ಆಗಲಿ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.