ADVERTISEMENT

ಎಷ್ಟು ಜನ ಏಜೆಂಟರನ್ನು ಇಟ್ಟುಕೊಂಡಿದ್ದೀರಿ:ಅಧಿಕಾರಿಯ ಚಳಿ ಬಿಡಿಸಿದ ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ   

ಬೆಂಗಳೂರು: ‘ನಿಮಗೆ ಎಷ್ಟು ಜನ ಏಜೆಂಟ್‌ ಇದ್ದಾರೆ. ಅವರಲ್ಲಿ ಅಧಿಕೃತ ಯಾರು ಎಂಬ ಬೋರ್ಡ್‌ ಹಾಕಿಸಿಬಿಡಿ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಯ ಮೇಲೆ ಕೆಂಡಾಮಂಡಲರಾದ ಘಟನೆ ನಡೆದಿದೆ.

ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಜನರು ತಮ್ಮ ಕೆಲಸಗಳಿಗೆ ಏಜೆಂಟರನ್ನೇ ಭೇಟಿಯಾಗಲಿ ಬಿಡಿ. ನೀವೂ ನನಗೆ ಸಿಗಲ್ಲ ಎಂದರೆ ಜನರ ಕಥೆ ಏನು? ಜನ ಯಾರನ್ನು ಸಂಪರ್ಕಿಸಬೇಕು?  ನಮ್ಮ ಕಚೇರಿಯಲ್ಲಿ ಯಾವ ಏಜೆಂಟ್ ಅನ್ನು ಸಂಪರ್ಕಿಸಬೇಕು ಎನ್ನುವುದು ನಮ್ಮ ಆಫೀಸ್‌ನಲ್ಲಿ ಇರುವವರಿಗೇ ಗೊತ್ತಿಲ್ಲ. ನೀವು ದೂರವಾಣಿ ಕರೆಗೂ ಸಿಗುವುದಿಲ್ಲ. ವೈಯಕ್ತಿಕವಾಗಿಯೂ ಸಿಗುವುದಿಲ್ಲ. ನೀವು ಆಫೀಸ್‌ನಲ್ಲಿ ಇರಲ್ಲ. ಕೋರ್ಟ್‌ ನಡೆಸಿ ಕೈಗೆ ಸಿಗದೆ ಹಿಂದಿನ ಬಾಗಿಲಿನಿಂದ ಹೋಗುತ್ತೀರಿ. ಆದ್ದರಿಂದ ಯಾರನ್ನಾದರೂ ಇಟ್ಟು ಬಿಡಿ.’ ಎಂದರು.

ADVERTISEMENT

‘ನಮ್ಮ ಮಾತು ಹಾಗಿರಲಿ ಜನರನ್ನು ಎದುರಿಸಲು ನೀವು ತಯಾರಿಲ್ಲ. ಅವರಿಗೆ ಉತ್ತರ ಕೊಡುವುದಿಲ್ಲ. ಒಬ್ಬರು ಅಲ್ಲದಿದ್ದರೆ 2–3 ಏಜೆಂಟರನ್ನಾದರೂ ಇಟ್ಟುಕೊಳ್ಳಿ. ಕಳೆದ ಎರಡೂವರೆ ತಿಂಗಳಿನಲ್ಲಿ 1,730 ಪ್ರಕರಣಗಳಲ್ಲಿ 30 ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದೀರಿ. ನಿಜವಾಗಿಯೂ ನಿಮಗೆ ಜನರ ಬಗ್ಗೆ ಕಾಳಜಿ ಇದೆಯೇ. ಸುಮ್ಮನೆ ಮಾತನಾಡಿ ಸಮಯ ವ್ಯರ್ಥ ಮಾಡುವುದು ಬೇಡ. ನಿಮ್ಮನ್ನು ಅವಮಾನಿಸಿ ನನಗೆ ಏನೂ ಸಿಗುವುದಿಲ್ಲ. ಜನರ ಕೆಲಸ ಆಗಬೇಕು ಅಷ್ಟೇ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.