ಬೆಂಗಳೂರು: ‘ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳನ್ನು 90 ದಿನಗಳ ಒಳಗೆ ಇತ್ಯರ್ಥ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
ವಿಡಿಯೊ ಸಂವಾದದ ಮೂಲಕ ರಾಜ್ಯದ ಎಲ್ಲ ತಹಶೀಲ್ದಾರರ ಜತೆ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
‘ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ತಕರಾರು ಅರ್ಜಿಗಳ ವಿಲೇವಾರಿ ಕೆಲಸ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಂಡಿತ್ತು. ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ 212 ದಿನ ತೆಗೆದುಕೊಳ್ಳುತ್ತಿದ್ದರೆ, ಈಗ 82 ದಿನಕ್ಕೆ ಇಳಿಸಲಾಗಿತ್ತು. ಆದರೆ, ದಿನ ಕಳೆದಂತೆ ತಕರಾರು ಅರ್ಜಿಗಳ ಇತ್ಯರ್ಥದ ಕೆಲಸ ಮತ್ತೆ ವೇಗ ಕಳೆದುಕೊಳ್ಳುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ತಕರಾರು ಅರ್ಜಿಗಳ ವಿಲೇಗಾಗಿ ಜನಸಾಮಾನ್ಯರು ಪ್ರತಿ ದಿನ ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ಶಾಶ್ವತವಾಗಿ ತಡೆಯಬೇಕು ಎಂಬ ಕಾರಣದಿಂದ ವಿಶೇಷ ಅಭಿಯಾನ ಆರಂಭಿಸಲಾಗಿತ್ತು. ಹಲವು ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೆಲವು ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಇಲಾಖೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದರು.
ಅಧಿಕಾರಿಗಳ ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳು 90 ದಿನ ಮೀರಿ ಒಂದು ಪ್ರಕರಣವನ್ನು ಉಳಿಸಿಕೊಂಡಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಾದ್ಯಂತ ಪೋಡಿ ದುರಸ್ತಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ಈ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಯಲ್ಲಿ ಪೋಡಿ ದುರಸ್ತಿ ಕೆಲಸ ಚುರುಕುಗೊಂಡಿರುವ ಬಗ್ಗೆ ಅಧಿಕಾರಿಗಳ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಇತರೆ ಜಿಲ್ಲೆಗಳೂ ಪೋಡಿ ದುರಸ್ತಿ ಕೆಲಸಕ್ಕೆ ವೇಗ ನೀಡಬೇಕು. ಅಲ್ಲದೇ, ರೈತರ ಬಳಿ ಭೂಮಂಜೂರಿಗೆ ಸಂಬಂಧಿಸಿ ಕನಿಷ್ಠ 3 ದಾಖಲೆ ಇದ್ದರೂ ಸಹ ಅಂತಹ ಪ್ರಕರಣಗಳನ್ನು ಪೋಡಿ ಮಾಡಿಕೊಡಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.