ಕೃಷ್ಣದೇವರಾಯರ ಸಮಾಧಿ ಮೇಲೆ ಮಾಂಸ ಮಾರಾಟ
(ವಿಡಿಯೊ ಸ್ಕ್ರೀನ್‌ಗ್ರಾಬ್–@BasanagoudaBJP)
ಬೆಂಗಳೂರು: ಕೃಷ್ಣದೇವರಾಯರ ಸಮಾಧಿಯನ್ನು ಕೆಲ ಸ್ಥಳೀಯರು ಮಾಂಸದ ಮಾರುಕಟ್ಟೆಯಾಗಿ ಪರಿವರ್ತಿಸಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ' ಎಂದು ಕಿಡಿಕಾರಿದ್ದಾರೆ.
'ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯಗಿ ಕೊಂದ ಔರಂಗಜೇಬನ ಸಮಾಧಿಯನ್ನು ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ. ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ, ಕಲೆ, ಸಾಹಿತ್ಯ ರಂಗಗಳ ಪೋಷಕ ಶ್ರೀ ಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ' ಎಂದು ಪ್ರಶ್ನಿಸಿದ್ದಾರೆ.
'ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ. ಮಾಂಸವನ್ನು ಮಾರುತ್ತ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವ ಇಂತವರನ್ನು ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ' ಎಂದೂ ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.