ADVERTISEMENT

‘ಕಾಡುಪ್ರಾಣಿ ಸಂರಕ್ಷಣೆಗೆ ನೆರವಷ್ಟೇ ನಮ್ಮ ಕಾಳಜಿ’

ಅರಣ್ಯ ಇಲಾಖೆ ನೀಡಿರುವ ಸ್ವೀಕೃತಿಗಳ ಮುಂದಿಟ್ಟ ವಿಜ್ಞಾನಿ ಕೃತಿ ಕಾರಂತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
ಎಚ್‌.ಡಿ.ಕೋಟೆ ತಾಲ್ಲೂಕಿನ ಹಾದನೂರು ಗ್ರಾಮದ ರೈತ ಶೀರಯ್ಯ ಕುಟುಂಬದಿಂದ ಆನೆ ದಾಳಿಯಿಂದ ಬೆಳೆ ಹಾನಿಯಾದ ಬಗ್ಗೆ ‘ವೈಲ್ಡ್‌ ಸೇವೆ’ ಸಿಬ್ಬಂದಿ ಮಹದೇವಸ್ವಾಮಿ ಮಾಹಿತಿ ಪಡೆಯುತ್ತಿರುವುದು (ಸಂಗ್ರಹ ಚಿತ್ರ)
ಎಚ್‌.ಡಿ.ಕೋಟೆ ತಾಲ್ಲೂಕಿನ ಹಾದನೂರು ಗ್ರಾಮದ ರೈತ ಶೀರಯ್ಯ ಕುಟುಂಬದಿಂದ ಆನೆ ದಾಳಿಯಿಂದ ಬೆಳೆ ಹಾನಿಯಾದ ಬಗ್ಗೆ ‘ವೈಲ್ಡ್‌ ಸೇವೆ’ ಸಿಬ್ಬಂದಿ ಮಹದೇವಸ್ವಾಮಿ ಮಾಹಿತಿ ಪಡೆಯುತ್ತಿರುವುದು (ಸಂಗ್ರಹ ಚಿತ್ರ)   

ಬೆಂಗಳೂರು: ಕಾಡುಪ್ರಾಣಿಗಳಿಂದ ಸಮಸ್ಯೆ ಎದುರಿಸಿರುವ ಕುಟುಂಬಗಳು ಅರಣ್ಯ ಇಲಾಖೆಯಿಂದ ಪರಿಹಾರ ಪಡೆಯಲು ‘ವೈಲ್ಡ್‌ ಸೇವೆ’ ಕಾರ್ಯಕ್ರಮದ ಮೂಲಕ ನೆರವಾಗಿರುವ ಕುರಿತು ಸೆಂಟರ್‌ಫಾರ್‌ ವೈಲ್ಡ್‌ಲೈಫ್‌ ಸ್ಟಡೀಸ್‌ (ಸಿಡಬ್ಲ್ಯುಎಸ್‌) ಸಂಸ್ಥೆಯ ಮುಖ್ಯ ಸಂರಕ್ಷಣಾ ವಿಜ್ಞಾನಿ ಡಾ.ಕೃತಿ ಕೆ.ಕಾರಂತ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ರೋಲೆಕ್ಸ್‌ ಸಂಸ್ಥೆಯು ಕೃತಿ ಅವರಿಗೆ 2019ನೇ ಸಾಲಿನ ರೋಲೆಕ್ಸ್‌ ಪ್ರಶಸ್ತಿ ನೀಡಿ ಗೌರವಿಸಿದೆ. ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು.

‘ವೈಲ್ಡ್‌ ಸೇವೆ ಕಾರ್ಯಕ್ರಮದ ಮೂಲಕ ಸಂತ್ರಸ್ತ ಕುಟುಂಬಕ್ಕೆ ನೆರವಾಗಿರುವುದಕ್ಕೆ ಯಾವುದೇ ಆಧಾರ ಇಲ್ಲ. ವನ್ಯಜೀವಿ ದಾಳಿಯಿಂದ ಉಂಟಾಗುವ ಜಾನುವಾರುಗಳ ಸಾವು ಅಥವಾ ಬೆಳೆ ಹಾನಿ ಪ್ರಕರಣಗಳಲ್ಲಿ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಸರ್ಕಾರೇತರ ಸಂಸ್ಥೆ ಅಥವಾ ವ್ಯಕ್ತಿ ಭಾಗಿಯಾಗುವುದಕ್ಕೆ ಅವಕಾಶ ಇಲ್ಲ’ ಎಂದು ಪ್ರತಿಪಾದಿಸಿತ್ತು.

ADVERTISEMENT

ಅರಣ್ಯ ಇಲಾಖೆಯ ವಾದವನ್ನು ತಳ್ಳಿಹಾಕಿರುವ ಕೃತಿ, ‘ಸರ್ಕಾರದಿಂದ ಪರಿಹಾರ ಪಡೆಯಲು ಅಗತ್ಯ ಇರುವ ದಾಖಲೆಗಳನ್ನು ಪಡೆಯಲು ಸಂತ್ರಸ್ತ ಕುಟುಂಬಗಳಿಗೆ ‘ವೈಲ್ಡ್‌ ಸೇವೆ’ ಮೂಲಕ ಒದಗಿಸಿ ನೆರವಾಗುತ್ತಿದ್ದೇವೆ. ನಾಗರಹೊಳೆ ಹಾಗೂ ಬಂಡಿಪುರ ರಾಷ್ಟ್ರೀಯ ಉದ್ಯಾನಗಳ ಅಂಚಿನಲ್ಲಿರುವ ಗ್ರಾಮಗಳ ಜನರಿಗೆ ನೆರವಾಗಲೆಂದೇ ಒಂಬತ್ತು ಸಿಬ್ಬಂದಿ ನೇಮಿಸಿದ್ದೇವೆ. ಅವರು ಅರಣ್ಯ ಇಲಾಖೆಯ ತಳಮಟ್ಟದ ಸಿಬ್ಬಂದಿ ಜೊತೆ ಸೇರಿಯೇ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಡುಪ್ರಾಣಿಗಳ ದಾಳಿಯಿಂದ ನಷ್ಟ ಅನುಭವಿಸುವ ಜನರು ಅವುಗಳಿಗೆ ಹಾನಿ ಉಂಟುಮಾಡುವ ಅಪಾಯವಿರುತ್ತದೆ. ಅವರು ಅನುಭವಿಸುವ ನಷ್ಟಕ್ಕೆ ನಾವು ಪರಿಹಾರ ನೀಡಲು ಸಾಧ್ಯವಿಲ್ಲ. ಸರ್ಕಾರದಿಂದ ಪರಿಹಾರ ಪಡೆಯಲು ನೆರವಾದರೆ ವನ್ಯಜೀವಿಗಳ ಮೇಲೆ ಅವರಿಗಿರುವ ಆಕ್ರೋಶ ಕಡಿಮೆಯಾಗಬಹುದು ಎಂಬ ಉದ್ದೇಶದಿಂದ 2015ರ ಜುಲೈನಿಂದಲೇ ಈ ಸೇವೆ ಒದಗಿಸುತ್ತಿದ್ದೇವೆ’ ಎಂದರು.

‘ಈ ಸೇವೆಗಾಗಿ ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಕಾಡುಪ್ರಾಣಿ ದಾಳಿಯಿಂದ ಬೆಳೆ ನಾಶವಾದರೆ, ಆಸ್ತಿ ಪಾಸ್ತಿ ಹಾನಿಯಾದರೆ, ಜಾನುವಾರುಗಳು ಗಾಯಗೊಂಡರೆ ಅಥವಾ ಸತ್ತರೆ, ವ್ಯಕ್ತಿಗಳು ಗಾಯಗೊಂಡರೆ ಅಥವಾ ಸತ್ತರೆ ಟೋಲ್‌ಫ್ರೀ ಸಂಖ್ಯೆಗೆ ಸಂತ್ರಸ್ತರು ಕರೆ ಮಾಡುತ್ತಾರೆ. ನಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ನೆರವಾಗುತ್ತಾರೆ. ಹಾನಿ ಕುರಿತ ಛಾಯಾಚಿತ್ರ, ಜಮೀನಿನ ಪಹಣಿ, ಆಧಾರ್‌ ಚೀಟಿ ಮತ್ತಿತರ ದಾಖಲೆಗಳ ಪ್ರತಿಗಳನ್ನು ಉಚಿತವಾಗಿ ಒದಗಿಸುತ್ತಾರೆ. ವೈಲ್ಡ್‌ ಸೇವೆ ಮೂಲಕ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಇಲಾಖೆ ಪರಿಹಾರವನ್ನೂ ನೀಡಿದೆ’ ಎಂದರು. ವೈಲ್ಡ್‌ ಸೇವೆ ಸಿಬ್ಬಂದಿ ಸಂತ್ರಸ್ತರಿಗೆ ನೆರವಾಗುವ ಛಾಯಾಚಿತ್ರಗಳನ್ನು ಹಾಗೂ ಅರ್ಜಿ ಸಲ್ಲಿಸಿರುವ ಕುರಿತು ಅರಣ್ಯ ಇಲಾಖೆ ನೀಡಿರುವ ಸ್ವೀಕೃತಿಗಳನ್ನು ಅವರು ಪ್ರದರ್ಶಿಸಿದರು.

‘ಈಗಲೂ ನಮಗೆ ಸಂತ್ರಸ್ತರಿಂದ ಕರೆ ಬರುತ್ತಿದೆ. ಯಾರೇ ಅಡ್ಡಿಪಡಿಸಿದರೂ ವೈಲ್ಡ್‌ಸೇವೆ ಮುಂದುವರಿಯಲಿದೆ’ ಎಂದರು.

ಅಂಕಿ ಅಂಶ

6,505:ವೈಲ್ಡ್‌ಸೇವೆ ಕಾರ್ಯಕ್ರಮದಿಂದ ನೆರವು ಪಡೆದ ಫಲಾನುಭವಿಗಳ ಸಂಖ್ಯೆ

13,702:ಈ ಕಾರ್ಯಕ್ರಮದ ಮೂಲಕ ಅರಣ್ಯ ಇಲಾಖೆಗೆ ತಲುಪಿಸಿರುವ ಅರ್ಜಿಗಳು

48 ಕೊಟ್ಟಿಗೆ ಕಟ್ಟಿಸಿಕೊಟ್ಟ ವೈಲ್ಡ್‌ ಸೇವೆ

‘ಕಾಡುಗಳ ಅಂಚಿನಲ್ಲಿರುವ 48 ಕುಟುಂಬಗಳಿಗೆ ವೈಲ್ಡ್‌ ಸೇವೆ ಕಾರ್ಯಕ್ರಮದ ಅಂಗವಾಗಿ ಜಾನುವಾರು ಕೊಟ್ಟಿಗೆಗಳನ್ನು ಕಟ್ಟಿಸಿಕೊಟ್ಟಿದ್ದೇವೆ’ ಎಂದು ಕೃತಿ ತಿಳಿಸಿದರು.

‘ಜಾನುವಾರುಗಳು ರಾತ್ರಿ ವೇಳೆ ಕಾಡುಪ್ರಾಣಿ ದಾಳಿಗೆ ಬಲಿ ಆಗಬಾರದು ಎಂಬುದು ನಮ್ಮ ಕಳಕಳಿ. ಕೊಟ್ಟಿಗೆ ನಿರ್ಮಾಣದ ಶೇ 70ರಷ್ಟು ವೆಚ್ಚವನ್ನು ನಾವು ಭರಿಸುತ್ತೇವೆ. ಕೊಟ್ಟಿಗೆಯನ್ನು ಚೆನ್ನಾಗಿ ನಿರ್ವಹಣೆ ಮಾಡಲಿ ಎಂಬ ಉದ್ದೇಶ ಸ್ವಲ್ಪ ಮೊತ್ತವನ್ನು ಅವರೇ ಭರಿಸುವಂತೆ ಹೇಳಿದ್ದೇವೆ’ ಎಂದರು.

‘ಕಾಡುಗಳ ಅಂಚಿನಲ್ಲಿರುವ 48 ಕುಟುಂಬಗಳಿಗೆ ವೈಲ್ಡ್‌ ಸೇವೆ ಕಾರ್ಯಕ್ರಮದ ಅಂಗವಾಗಿ ಜಾನುವಾರು ಕೊಟ್ಟಿಗೆಗಳನ್ನು ಕಟ್ಟಿಸಿಕೊಟ್ಟಿದ್ದೇವೆ’ ಎಂದು ಕೃತಿ ತಿಳಿಸಿದರು.

‘ಜಾನುವಾರುಗಳು ರಾತ್ರಿ ವೇಳೆ ಕಾಡುಪ್ರಾಣಿ ದಾಳಿಗೆ ಬಲಿ ಆಗಬಾರದು ಎಂಬುದು ನಮ್ಮ ಕಳಕಳಿ. ಕೊಟ್ಟಿಗೆ ನಿರ್ಮಾಣದ ಶೇ 70ರಷ್ಟು ವೆಚ್ಚವನ್ನು ನಾವು ಭರಿಸುತ್ತೇವೆ. ಕೊಟ್ಟಿಗೆಯನ್ನು ಚೆನ್ನಾಗಿ ನಿರ್ವಹಣೆ ಮಾಡಲಿ ಎಂಬ ಉದ್ದೇಶ ಸ್ವಲ್ಪ ಮೊತ್ತವನ್ನು ಅವರೇ ಭರಿಸುವಂತೆ ಹೇಳಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.