ADVERTISEMENT

ವಿಶ್ವದರ್ಜೆ ಪ್ರವಾಸಿ ತಾಣವಾಗಿ ಬೃಂದಾವನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 14:25 IST
Last Updated 21 ಆಗಸ್ಟ್ 2020, 14:25 IST
ಬಾಗಿನ ಆರ್ಪಣೆಗೂ ಮುನ್ನ ಮುಖ್ಯಮಂತ್ರಿ ಪೂಜೆ ಸಲ್ಲಿಸಿದರು
ಬಾಗಿನ ಆರ್ಪಣೆಗೂ ಮುನ್ನ ಮುಖ್ಯಮಂತ್ರಿ ಪೂಜೆ ಸಲ್ಲಿಸಿದರು   

ಮಂಡ್ಯ: ‘ಬೃಂದಾವನ ಉದ್ಯಾನವನ್ನು ವಿಶ್ವದರ್ಜೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಕೆಆರ್‌ಎಸ್‌ ಜಲಾಶಯದ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಗರಿಷ್ಠ ಮಟ್ಟ ತಲುಪಿರುವ ಕೆಆರ್‌ಎಸ್‌ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ಜಲಾಶಯ ನಿರ್ಮಾಣವಾದ ನಂತರ ಮೊದಲ ಬಾರಿಗೆ ನಮ್ಮ ಸರ್ಕಾರ ₹ 8.40 ಕೋಟಿ ವೆಚ್ಚದಲ್ಲಿ 16 ಗೇಟ್‌ಗಳನ್ನು ಬದಲಾವಣೆ ಮಾಡುತ್ತಿದೆ. ಆ ಮೂಲಕ ಜಲಾಶಯಕ್ಕೆ ಪುನಶ್ಚೇತನ ನೀಡಲಾಗುತ್ತಿದೆ. ಸರ್‌.ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾಗಿರುವ ಕೆಆರ್‌ಎಸ್‌ ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ 3.45 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ನಾನು ಮುಖ್ಯಮಂತ್ರಿಯಾಗಿ 5ನೇ ಬಾರಿ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡುತ್ತಿರುವುದು ನನ್ನ ಪಾಲಿನ ಭಾಗ್ಯವಾಗಿದೆ. ಕೃಷಿಯ ಅಭಿವೃದ್ಧಿಗೆ ಮುನ್ನಡಿ ಬರೆದ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ನನಗೆ ಅತೀವ ಸಂತಸ ತಂದಿದೆ. ಜಲಾಶಯ ನಿರ್ಮಾಣಗೊಂಡ ನಂತರ ಇಲ್ಲಿಯವರೆಗೂ ಜಲಾಶಯ 36 ಬಾರಿ ಗರಿಷ್ಠ ಮಟ್ಟ ತಲುಪಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಜಲಾಶಯ ಭರ್ತಿಯಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಕೈಗೊಂಡ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ನೀರಾವರಿ ಇಲಾಖೆ ಅಡಿ ₹ 74 ಸಾವಿರ ಕೋಟಿ ವೆಚ್ಚದಲ್ಲಿ 28 ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈತರ ಜಮೀನಿಗೆ ನೀರು ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಏತ ನೀರಾವರಿ ಯೋಜನೆಗಳೂ ಜಾರಿಯಾಗುತ್ತಿವೆ. ಈ ಬಾರಿ ಉತ್ತಮ ಮಳೆಯಾಗಿದ್ದು ಕೆರೆಕಟ್ಟೆಗಳು ತುಂಬಿರುವುದು ಸಂತಸದ ವಿಚಾರವಾಗಿದೆ. ಶೇ 99ರಷ್ಟು ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ’ ಎಂದು ಹೇಳಿದರು.

‘ವಿವಿಧೆಡೆ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರು ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನಿಗಾ ವಹಿಸುವುದು. ಕೆಲವೆಡೆ ಅತೀವೃಷ್ಟಿ, ಅನಾವೃಷ್ಟಿ ಉಂಟಾಗಿ ಜನರು ತೊಂದರೆ ಅನುಭವಿಸಿದ್ದಾರೆ. ಅಂತಹ ಜನರಿಗೆ ಶೀಘ್ರ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಜಲಾಶಯದ ಮೇಲ್ಭಾಗದಲ್ಲಿ ಜ್ಯೋತಿಷಿ ಭಾನುಪ್ರಕಾಶ್‌ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆ ಕೈಗೊಳ್ಳಲಾಯಿತು. ಬಾಗಿನ ಅರ್ಪಣೆ ಮಾಡಿದ ಮುಖ್ಯಮಂತ್ರಿ ಕೆಳಭಾಗದಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಇಡೀ ಸಮಾರಂಭ ಅತ್ಯಂತ ಸರಳವಾಗಿ ನಡೆಯಿತು. ಬಾಗಿನ ಅರ್ಪಿಸುವ ಸ್ಥಳಕ್ಕೆ ಕೆಲವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. 20 ನಿಮಿಷದಲ್ಲಿ ಸಮಾರಂಭ ಮುಕ್ತಾಯಗೊಂಡಿತು.

ಜಲಸಂಪನ್ಮೂಲ ಇಲಾಖೆಯ ಒಂದು ವರ್ಷ ಸಾಧನೆಯ ವಿಶೇಷ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ, ಸಹಕಾರ ಸಚಿವ ಎಚ್‌.ಟಿ.ಸೋಮಶೇಖರ್‌, ಸಂಸದರಾದ ಎ.ಸುಮಲತಾ, ಪ್ರತಾಪ್‌ ಸಿಂಹ, ಶಾಸಕರಾದ ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ನಾಗೇಂದ್ರ, ಎನ್‌.ಅಪ್ಪಾಜಿಗೌಡ ಇದ್ದರು.

ಕೆಆರ್‌ಎಸ್‌: ಕಂದಾಯ ಗ್ರಾಮ

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ‘ಕಳೆದ ವರ್ಷ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಮಾರಂಭದಲ್ಲಿ ಕೆಆರ್‌ಎಸ್‌ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಮನವಿ ಸಲ್ಲಿಸಿದ್ದೆ. ನಮ್ಮ ಮನವಿಗೆ ಸ್ಪಂದಿಸಿರುವ ಅವರು ವರ್ಷದೊಳಗೆ ಕಂದಾಯ ಗ್ರಾಮವಾಗಿ ರೂಪಿಸುವ ಪ್ರಕ್ರಿಯೆಗೆ ಅಂತಿಮ ರೂಪ ನೀಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕ್ಷೇತ್ರದ ಜನರ ಪರವಾಗಿ ಅಭಿನಂದಿಸಲಾಗುವುದು’ ಎಂದು ಹೇಳಿದರು.

ಭದ್ರತಾ ಗೊಂದಲ: ಪರದಾಟ

ಜಲಾಶಯ ಭದ್ರತೆಗೆ ನಿಯೋಜಿಸಿರುವ ಕೈಗಾರಿಕಾ ಭದ್ರತಾ ಪಡೆ ಹಾಗೂ ಸ್ಥಳೀಯ ಪೊಲೀಸರ ಸಮನ್ವಯತೆ ಕೊರತೆಯಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪ್ರವೇಶ ಸಿಗದೇ ಪರದಾಡಬೇಕಾಯಿತು.

ಮಂಡ್ಯದಿಂದ ಪತ್ರಕರ್ತರನ್ನು ಕರೆತಂದಿದ್ದ ವಾ‌ರ್ತಾ ಇಲಾಖೆ ವಾಹನಕ್ಕೆ ಪ್ರವೇಶ ನೀಡದ ಕಾರಣ ಅರ್ಧಗಂಟೆಗೂ ಹೆಚ್ಚುಕಾಲ ಮುಖ್ಯದ್ವಾರದಲ್ಲೇ ಕಾಯಬೇಕಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಮಧ್ಯಪ್ರವೇಶಿಸಿ ವಾಹನ ಬಿಡುವಂತೆ ಸೂಚನೆ ನೀಡಿದರು. ಆದರೆ ಅಷ್ಟೊತ್ತಿಗಾಗಲೇ ಬಾಗಿನ ಅರ್ಪಣೆ ಸಮಾರಂಭ ಮುಗಿದು ಹೋಗಿತ್ತು.

ಬಂಧನ, ಬಿಡುಗಡೆ

ಬಾಗಿನ ಅರ್ಪಣೆ ಸಮಾರಂಭದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧನ ಮಾಡಿ, ಸಂಜೆ ಬಿಡುಗಡೆ ಮಾಡಿದರು. ಹಲವು ಮುಖಂಡರನ್ನು ಬೆಳಿಗ್ಗೆಯೇ ವಶಕ್ಕೆ ಪಡೆಯಲಾಗಿತ್ತು. ಇನ್ನೂ ಕೆಲವರು ಮನೆಯಿಂದ ಹೊರಗೆ ಬಾರದೆ ದಿಗ್ಬಂಧನ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.