ADVERTISEMENT

ಬಿಟ್‌ಕಾಯಿನ್‌, ಹಾಲಿ– ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಲಾಭ: ಕೆಆರ್‌ಎಸ್‌ ಪಕ್ಷ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 17:11 IST
Last Updated 19 ನವೆಂಬರ್ 2021, 17:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬಿಟ್‌ಕಾಯಿನ್‌ ಹಗರಣದಲ್ಲಿ ಸರ್ಕಾರದ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌) ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆಗ್ರಹಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಸರ್ಕಾರ ಬಿಟ್‌ಕಾಯಿನ್ ಪ್ರಕರಣ ಮುಚ್ಚಿ ಹಾಕಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಹಗರಣದ ಸೂತ್ರಧಾರ ಆರೋಪಿ ಶ್ರೀಕಿ ಸತ್ಯ ಬಾಯ್ಬಿಟ್ಟರೆ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಅಪಾಯ. ಶ್ರೀಕಿ ರಕ್ಷಣೆಯ ಸಂಪೂರ್ಣ ಹೊಣೆ ಸರ್ಕಾರದ್ದು’ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ‘ಹಗರಣದಲ್ಲಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಲಾಭ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯ ಮುಖ್ಯಸ್ಥ ಸಂದೀಪ್ ಪಾಟೀಲ ಅವರ ಮೇಲೆ ಸಾಕ್ಷ್ಯ ನಾಶದ ಆರೋಪಗಳು ಕೇಳಿಬರುತ್ತಿದ್ದು, ಅವರನ್ನು ಕೂಡಲೇ ತನಿಖೆ ನಡೆಸಿ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಶ್ರೀಕಿ ಜೊತೆಗೆ ಕಾಂಗ್ರೆಸ್‌ ಮುಖಂಡರ ನಂಟಿರುವ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಇದರ ಬಗ್ಗೆಯೂ ಸಮಗ್ರ ತನಿಖೆ ಆಗಬೇಕು. ಸರ್ಕಾರ ಮತ್ತು ಪೊಲೀಸ್ ವಲಯದಲ್ಲಿ ಗೋಪ್ಯವಾಗಿ ಅನೇಕ ವಿಚಾರಗಳು ನಡೆಯುತ್ತಿದ್ದು, ರಾಜ್ಯದ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.