ಶಿವಮೊಗ್ಗ: 'ಮುಸ್ಲಿಮರ ಮತ ಕೈತಪ್ಪುತ್ತವೆ ಎಂಬ ಭ್ರಮೆಯಿಂದ ರಾಮ ಮಂದಿರ ಪ್ರತಿಷ್ಠಾಪನೆ ದಿನ ಸೋಮವಾರ ರಾಜ್ಯದಲ್ಲಿ ರಜೆ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಮ ಭಕ್ತರ, ಸಾಧು ಸಂತರ ಶಾಪದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಶ್ಚಿತವಾಗಿ ಸೋಲು ಕಾಣಲಿದೆ' ಎಂದು ಭವಿಷ್ಯ ನುಡಿದರು.
ರಾಮಮಂದಿರ ಲೋಕಾರ್ಪಣೆ ಸಂದರ್ಭ ಇಡೀ ಪ್ರಪಂಚಕ್ಕೆ ಐತಿಹಾಸಿಕ ದಿನ. ಪ್ರಪಂಚದ ಹಿಂದೂಗಳು ಶತಮಾನಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಸಂದರ್ಭ. 500 ವರ್ಷಗಳ ಹೋರಾಟ, ಸಾವಿರಾರು ಬಲಿದಾನಗಳ ಕಾರಣ ಈ ದಿನ ಬಂದಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದ್ದಾರೆ. ಆ ದಿನವನ್ನು ದೀಪಾವಳಿ ಹಬ್ಬದಂತೆ ಸಂಭ್ರಮದಿಂದ ಆಚರಣೆಗೆ ಕರೆ ಕೊಟ್ಟಿದ್ದಾರೆ ಎಂದರು.
ಆದರೆ ರಾಜ್ಯದಲ್ಲಿ ರಜೆ ಘೋಷಣೆ ಮಾಡೊಲ್ಲ ಎಂದು ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದ್ದಾರೆ. ಪ್ರತಿಷ್ಠಾಪನೆ ದಿನ ಶ್ರೀರಾಮನ ಹೆಸರು ಅಜರಾಮರದ ರೀತಿ ಉಳಿದರೆ ಸಿದ್ದರಾಮಯ್ಯ ಹೆಸರು ಖಳನಾಯಕನ ರೀತಿ ಉಳಿಯಲಿದೆ ಎಂದರು.
ರಾಜ್ಯದಲ್ಲಿ ರಜೆ ಘೋಷಣೆ ಮಾಡಿ ಖಳನಾಯಕ ಹಣೇಪಟ್ಟಿ ಸಿದ್ದರಾಮಯ್ಯ ಕಳಚಿಕೊಳ್ಳಲಿ ಎಂದು ಸಲಹೆ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲುವ ಪ್ರಶ್ನೆಯೇ ಇಲ್ಲ. ಹೀಗಾಗಿ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.