ADVERTISEMENT

ಸಂಗೊಳ್ಳಿ ರಾಯಣ್ಣ ವಿವಾದ: ಪ್ರಕರಣಗಳನ್ನು ವಾಪಸ್‌ ಪಡೆಯುತ್ತೇವೆ –ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 5:33 IST
Last Updated 29 ಆಗಸ್ಟ್ 2020, 5:33 IST
 ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಳಗಾವಿ: ‘ತಾಲ್ಲೂಕಿನ ಪೀರನವಾಡಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನನ್ನೊಂದಿಗೆ ತಿಳಿಸಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ವಿವಾದ ಬಗೆಹರಿಯುವುದಕ್ಕೆ ಮುನ್ನವೇ ಸಚಿವರೊಂದಿಗೆ ಚರ್ಚಿಸಿದ್ದೇನೆ. ಯಾರ‍್ಯಾರ ಮೇಲೆ ಪ್ರಕರಣವಿದೆಯೋ ಅವೆಲ್ಲವನ್ನೂ ವಾಪಸ್ ಪಡೆಯಲಾಗುವುದು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಬೆಳಗಾವಿಗೆ ಭೇಟಿ ನೀಡುವ ತೀರ್ಮಾನವನ್ನು ನಾಲ್ಕು ದಿನಗಳ ಹಿಂದೆ ಕೈಗೊಂಡಿದ್ದೆ. ಪ್ರತಿಮೆ ವಿವಾದ ಇಷ್ಟು ಸುಲಭವಾಗಿ ಇತ್ಯರ್ಥ ಆಗುತ್ತದೆ ಮತ್ತು ಸಂಘರ್ಷಗಳಿಲ್ಲದೆ ಮಹಾನಾಯಕರಿಗೆ ಗೌರವ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಶಿವಾಜಿ ಹಾಗೂ ರಾಯಣ್ಣ ಹೋರಾಟ ಸ್ಮರಣೀಯ. ಇಬ್ಬರೂ ಮಹಾಪುರುಷರು ದೇಶಕ್ಕಾಗಿ ಹೋರಾಡಿದವರು’ ಎಂದರು.

‘ಕೆಲ ಸಂಕುಚಿತ ಭಾವನೆಯಿಂದ ರಾಯಣ್ಣ ಹಾಗೂ ಶಿವಾಜಿ ಬೇರೆ ಬೇರೆ ಎನ್ನುವ ಭಾವನೆ ರಾಜ್ಯದಲ್ಲಿ ಬಂದಿತ್ತು. ಆದರೆ, ಶುಕ್ರವಾರ ಬೆಳಗಾವಿಯಲ್ಲಿ ಆಗಿರುವ ತೀರ್ಮಾನ ಎಲ್ಲ ರಾಷ್ಟ್ರ ಭಕ್ತರಿಗೆ ಸಂತೋಷ ತಂದಿದೆ’ ಎಂದು ಹೇಳಿದರು.

‘ರಾಯಣ್ಣ ಹಾಗೂ ಶಿವಾಜಿ ಯಾವ ಜಾತಿಯವರು, ಎಲ್ಲಿ ಹುಟ್ಟಿ ಬೆಳೆದರು ಹಾಗೂ ಅವರ ಭಾಷೆಗಳಾವುದು ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಇಬ್ಬರೂ ಜಾತಿ, ಪ್ರಾಂತ್ಯ ಹಾಗೂ ಭಾಷೆ ಎಲ್ಲವನ್ನೂ ಮೀರಿದ ಮಹಾಪುರುಷರು. ಅವರನ್ನು ಗೌರವದಿಂದ ನೋಡಬೇಕು ಎಂಬ ಸಂದೇಶವನ್ನು ಬೆಳಗಾವಿಯಿಂದ ಇಡೀ ದೇಶಕ್ಕೆ ರವಾನಿಸಿರುವುದು ಮಾದರಿಯಾಗಿದೆ. ಇಲ್ಲಿನ ತೀರ್ಮಾನದಿಂದ ಎಲ್ಲರಿಗೂ ಸಂತೋಷ ಆಗಿದೆ. ಕನ್ನಡಿಗರು–ಮರಾಠಿಗರು ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕ ಎನ್ನುವ ಪ್ರಶ್ನೆ ಇಲ್ಲ. ಎಲ್ಲವನ್ನೂ ಮೀರಿ ರಾಷ್ಟ್ರೀಯತೆಯ ದಿಕ್ಕಿನಲ್ಲಿ ನಿರ್ಧಾರ ಮಾಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ‌ ಹಾಗೂ ಶಾಂತಿಯುತವಾಗಿ ಹೋರಾಟ ನಡೆಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.