ಬೆಂಗಳೂರು: ಮೈಸೂರ್ ಸ್ಯಾಂಡಲ್ಸ್ ಎಂದರೆ ಗಂಧದ ಎಣ್ಣೆಯ ಸಾಬೂನು ಮಾತ್ರ ಎನ್ನುವ ಕಾಲ ಬಹಳ ಹಳತಾಯಿತು. ಈಗ ಮಲ್ಲಿಗೆ, ಲ್ಯಾವೆಂಡರ್, ಗುಲಾಬಿ, ಲೋಳೆಸರ... ಹೊಸ ಸುವಾಸನೆಯುಳ್ಳ ಸಾಬೂನುಗಳ ಪಟ್ಟಿ ಇದು.
ಗಂಧದೆಣ್ಣೆಯ ಸಾಬೂನಿಗೆ ಹೆಸರಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್) ‘ಮೈಸೂರ್ ಸ್ಯಾಂಡಲ್’ ಬ್ರ್ಯಾಂಡ್‌ನ ಅಡಿಯಲ್ಲಿ ಈಗ ಹೊಸ–ಹೊಸ ಉತ್ಪನ್ನಗಳನ್ನು ತಂದಿದೆ. ಗಂಧದೆಣ್ಣೆಯ ಸಾಬೂನಿಗೆ ಬೇಡಿಕೆ ಕುಂದಿಲ್ಲವಾದರೂ ಹೊಸ ಪರಿಮಳದ ಸಾಬೂನುಗಳು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿವೆ.
ಗಂಧದೆಣ್ಣೆ ಮತ್ತು ಬಾದಾಮಿ ಎಣ್ಣೆಯ ಮಿಶ್ರಣ ಇರುವ ಬೇಬಿ ಸಾಬೂನು, ಗಿಡಮೂಲಿಕೆ, ಬೇವಿನ ಎಣ್ಣೆ–ನಿಂಬೆ, ಅರಿಶಿನದ ಅಂಶಗಳಿರುವ ಸಾಬೂನುಗಳನ್ನೂ ಕೆಎಸ್‌ಡಿಎಲ್ ಈಚಿನ ದಿನಗಳಲ್ಲಿ ಮಾರುಕಟ್ಟೆಗೆ ತಂದಿದೆ. ಈ ಹೊಸ ಉತ್ಪನ್ನಗಳ ಬಿಡುಗಡೆಗೂ ಮುನ್ನ ಕಂಪನಿಯ ವಾರ್ಷಿಕ ಸಾಬೂನು ತಯಾರಿಕೆ 26,000 ಟನ್‌ಗಳಷ್ಟು ಇತ್ತು. ಈಗ ಅದು 34,000 ಟನ್‌ಗಳಿಗೆ ಏರಿಕೆಯಾಗಿದೆ.
ಹೊಸ ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಮಲ್ಲಿಗೆ ಪರಿಮಳದ ಸಾಬೂನು. ಗಂಧದೆಣ್ಣೆಯ ಸಾಬೂನಿನ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳ ಜತೆಗೆ ಮಲ್ಲಿಗೆ ಪರಿಮಳದ ದ್ರಾವಣವನ್ನು ಈ ಸಾಬೂನಿನ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವ ಕಾರಣಕ್ಕೆ ಈ ಸಾಬೂನಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ.
ಈಗ ಗಂಧದೆಣ್ಣೆಯ ಪ್ರಮಾಣ ಹಲವು ಪಟ್ಟು ಹೆಚ್ಚು ಇರುವ ‘ಪ್ರೀಮಿಯಂ’ ಸಾಬೂನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೆಎಸ್‌ಡಿಎಲ್ ಸಜ್ಜಾಗಿದೆ. ‘ಈ ಸಾಬೂನು ಯಾವುದೇ ಜಾಗತಿಕ ಕಂಪನಿಗಳ ಪ್ರೀಮಿಯಂ ಸಾಬೂನುಗಳಿಗೂ ಸಡ್ಡು ಹೊಡೆಯುವಂತಿದೆ. ಮೈಸೂರು ಸ್ಯಾಂಡಲ್ ಸಾಬೂನಿನ ಪರಂಪರೆ, ಆಧುನಿಕತೆ ಮತ್ತು ಐಷಾರಾಮದ ಸ್ಪರ್ಶ ಇರುವ ಈ ಸಾಬೂನು ಕಂಪನಿಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಡಲಿದೆ’ ಎನ್ನುತ್ತಾರೆ ಅವರು.
19 ಹೊಸ ಉತ್ಪನ್ನಗಳು: ಮಾರುಕಟ್ಟೆಯಲ್ಲಿ ಕೆಎಸ್‌ಡಿಎಲ್‌ನ 48 ಉತ್ಪನ್ನಗಳು ಈಗ ಇವೆ. ಇವುಗಳಲ್ಲಿ ಸಾಬೂನು, ಬಟ್ಟೆಯ ಸೋಪು, ವಿವಿಧ ಪರಿಮಳದ ಶವರ್ ಜೆಲ್, ವಿವಿಧ ಪರಿಮಳದ ಸ್ಯಾನಿಟೈಸರ್, ಟಾಲ್ಕ್ ಪೌಡರ್‌ಗಳು, ಊದುಬತ್ತಿ, ಧೂಪ, ದೀಪದ ಎಣ್ಣೆ, ಗಂಧದೆಣ್ಣೆ, ಶುಚಿ ಕಿಟ್, ಡಿಯೋಡ್ರೆಂಟ್, ತೆಂಗಿನೆಣ್ಣೆ ಸೇರಿವೆ.
ಇವುಗಳಿಗಿಂತಲೂ ಭಿನ್ನವಾದ, ಕೆಲವು ಐಷಾರಾಮದ ಉತ್ಪನ್ನಗಳೂ ಸೇರಿ ಇನ್ನೂ ಹೊಸದಾಗಿ 19 ಉತ್ಪನ್ನಗಳನ್ನು ಬಿಡುಗಡೆ ಮಾಡಲು ಕೆಎಸ್‌ಡಿಎಲ್ ಸಜ್ಜಾಗಿದೆ.
‘₹400 ಕೋಟಿ ಲಾಭದ ನಿರೀಕ್ಷೆ’
ಹೊಸ ಉತ್ಪನ್ನಗಳು ಮತ್ತು ಮಾರುಕಟ್ಟೆ ವಿಸ್ತರಣೆಯ ಕಾರಣಕ್ಕೆ ಕಂಪನಿಯ ಲಾಭದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2024–25ನೇ ಸಾಲಿನಲ್ಲಿ ವಹಿವಾಟು ₹2000 ಕೋಟಿಯನ್ನು ದಾಟಲಿದ್ದು ಲಾಭ ₹400 ಕೋಟಿಯ ಗಡಿ ದಾಡುವ ನಿರೀಕ್ಷೆ ಇದೆ. 2030ರ ವೇಳೆಗೆ ವಹಿವಾಟನ್ನು ₹10000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಕಾರ್ಖಾನೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಹೊಸ ಕಾರ್ಖಾನೆಗಳ ಸ್ಥಾಪನೆಯ ಪ್ರಕ್ರಿಯೆ ನಡೆಯುತ್ತಿದೆ ಪ್ರಶಾಂತ್ ಪಿ.ಕೆ.ಎಂ. ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಡಿಎಲ್
‘ಜಾಗತಿಕ ಬ್ರ್ಯಾಂಡ್ ಆಗಿಸಬೇಕು’
ನಮ್ಮ ಸರ್ಕಾರ ಬರುವುದಕ್ಕೂ ಮುನ್ನ 23 ದೇಶಗಳಲ್ಲಷ್ಟೇ ಕಂಪನಿಯ ಉತ್ಪನ್ನಗಳು ರಫ್ತಾಗುತ್ತಿತ್ತು. ಈಗ 80 ದೇಶಗಳಿಗೆ ಮಾರುಕಟ್ಟೆ ವಿಸ್ತರಿಸಲಾಗಿದೆ. ಇದು ಇನ್ನಷ್ಟು ಹೆಚ್ಚಲಿದೆ. ಕೆಎಸ್‌ಡಿಎಲ್ ಅನ್ನು ಜಾಗತಿಕ ಬ್ರ್ಯಾಂಡ್ ಆಗಿಸಬೇಕು ಎಂಬುದು ನಮ್ಮ ಗುರಿ. ಇದಕ್ಕಾಗಿ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಕಂಪನಿ ಮುಂದಾಗಿದೆ. ಜತೆಗೆ ವಿಶ್ವದ ಎಲ್ಲ ದೇಶಗಳ ಪ್ರತಿಷ್ಠಿತ ನಗರಗಳಲ್ಲಿ ಮೈಸೂರ್ ಸ್ಯಾಂಡಲ್‌ನ ಉತ್ಪನ್ನಗಳು ದೊರೆಯುವಂತೆ ಮಾಡಬೇಕಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ. ಎಂ.ಬಿ.ಪಾಟೀಲ ಬೃಹತ್ ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.