ADVERTISEMENT

ಬಿಜೆಪಿಯಿಂದ ಮಂತ್ರಿಯಾದ ಮಾತ್ರಕ್ಕೆ ದಲಿತರಲ್ಲವೇ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ದಲಿತ ಉದ್ದಿಮೆದಾರರ ಸಂವಾದದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 17:41 IST
Last Updated 18 ಸೆಪ್ಟೆಂಬರ್ 2021, 17:41 IST
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ    

ಬೆಂಗಳೂರು: ‘ಬಿಜೆಪಿಯಿಂದ ಮಂತ್ರಿಯಾದ ಮಾತ್ರಕ್ಕೆ ದಲಿತ ಅಲ್ಲ ಎಂಬಂತೆ ಸಮುದಾಯ ನೋಡುತ್ತಿದೆ. ಈ ರೀತಿಯ ಮನಸ್ಥಿತಿ ಬದಲಾಗಬೇಕು’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಶನಿವಾರ ಆಯೋಜಿಸಿದ್ದ ದಲಿತ ಉದ್ದಿಮೆದಾರರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಸಂಘದ ಪರವಾಗಿ ಎಲ್‌.ಹನುಮಂತಯ್ಯ ಮನವಿ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವತಿ ಮುಖ್ಯ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾದೇವಿ, ಸಂಘದ ಕಾರ್ಯಾಧ್ಯಕ್ಷ ಸಿ.ಜೆ. ಶ್ರೀನಿವಾಸನ್, ಆದರ್ಶ ಯಲ್ಲಪ್ಪ, ಶಾಸಕ ಎನ್. ಮಹೇಶ್ ಇದ್ದರು -ಪ್ರಜಾವಾಣಿ ಚಿತ್ರ

‘2 ವರ್ಷ 1 ತಿಂಗಳ ಕಾಲ ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆ ವೇಳೆ ದಲಿತ ಸಂಘಟನೆಗಳು ನನ್ನ ಬಳಿ ಬರಲೇ ಇಲ್ಲ. ಬಿಜೆಪಿಯಿಂದ ಮಂತ್ರಿಯಾದ ಕೂಡಲೇ ನಾನು ದಲಿತನಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮನಸ್ಥಿತಿ ಬದಲಾಗದಿದ್ದರೆ ಸಮುದಾಯದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಈ ಬಗ್ಗೆ ಮುಕ್ತವಾಗಿ ಚರ್ಚೆ ಆಗಬೇಕು.ಇಡೀ ದೇಶದ ದಲಿತರನ್ನು ರಕ್ಷಿಸುವ ಜವಾಬ್ದಾರಿಯುತ ವ್ಯಕ್ತಿ ನಾನು.‌ ದಲಿತ ಹೋರಾಟಗಾರನಾಗಿ ಮಾತನಾಡುವುದು ಹೇಗೆ, ಮಂತ್ರಿಯಾಗಿ ಮಾತನಾಡುವುದು ಹೇಗೆ ಎಂಬುದು ಗೊತ್ತಿದೆ’ ಎಂದರು.

‘ಕೆಲವರು 60 ವರ್ಷಗಳ ಕಾಲ ಈ ಸಮಾಜಕ್ಕೆ ದುಡಿದಿದ್ದೇವೆ ಎಂದು ಹೇಳುತ್ತಾರೆ. ದಲಿತರ ಪರಿಸ್ಥಿತಿ ಬದಲಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳೇ ನಡೆದಿಲ್ಲ’ ಎಂದು ಹೇಳಿದರು.

ದಲಿತ ಯುವಕರಿಗೆ ಉದ್ಯಮದಲ್ಲಿ ತೊಡಗಿಕೊಳ್ಳುವ ಬಗ್ಗೆ ಮಾಹಿತಿ ಇಲ್ಲ. ಉದ್ದಿಮೆದಾರರ ಸಂಘ ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ನಡೆಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಮಾತನಾಡಿ, ‘ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ದಲಿತ ಉದ್ದಿಮೆದಾರರಿಗೂ ಸರ್ಕಾರ ಸಾಲ ನೀಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಎನ್.ಮಹೇಶ್ ಮಾತನಾಡಿ, ‘ದಲಿತರ ಸ್ಥಿತಿಯನ್ನು ಹಾಗೇ ಉಳಿಸಿ ಈ ದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮೇಲೆತ್ತದ ಹೊರತು ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಹೃದಯವಂತಿಕೆ ಅಧಿಕಾರಿ ವರ್ಗಕ್ಕೂ ಇರಬೇಕು’ ಎಂದು ಹೇಳಿದರು.

ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ನಾಗಾಂಬಿಕಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.