ADVERTISEMENT

ವಿದ್ಯಾರ್ಥಿಗಳಿಗೆ ಬಸ್‌ ‘ನಿಷೇಧ’: ನಿರ್ವಾಹಕರ ದುರ್ವರ್ತನೆಗೆ ಸಾರ್ವಜನಿಕರ ಬೇಸರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 18:47 IST
Last Updated 28 ಫೆಬ್ರುವರಿ 2019, 18:47 IST
ರಾಮನಗರದ ಐಜೂರು ವೃತ್ತದಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
ರಾಮನಗರದ ಐಜೂರು ವೃತ್ತದಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು   

ರಾಮನಗರ: ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ನಿರ್ವಾಹಕರು ‘ನಿಷೇಧ’ ಹೇರುತ್ತಿದ್ದಾರೆ. ಇದರಿಂದಾಗಿ ಪರೀಕ್ಷಾ ಸಮಯದಲ್ಲಿ ಸರಿಯಾಗಿ ಬಸ್‌ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು, ಡಿಪ್ಲೊಮಾ ಕಾಲೇಜು, ಬಸವನಪುರ ಬಳಿಯ ಸರ್ಕಾರಿ
ಕಾನೂನು ಕಾಲೇಜು, ಜಾನಪದ ಲೋಕದ ಬಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗೆ ದೂರದ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಈ ವಿದ್ಯಾರ್ಥಿಗಳು ವಾರ್ಷಿಕ ಪಾಸ್‌ ಹೊಂದಿದ್ದರೂ ಅವರಿಗೆ ಬಸ್‌ಗಳಲ್ಲಿ ಪ್ರವೇಶ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಮತ್ತು ನಿರ್ವಾಹಕರ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿದೆ.

‘ದೂರದ ಊರುಗಳಿಂದ ಕಾಲೇಜಿಗೆ ಬರುತ್ತೇವೆ. ಪ್ರಯಾಣಕ್ಕೆ ಒಂದೆರಡು ಗಂಟೆ ಹಿಡಿಯುತ್ತದೆ. ಇದರ ನಡುವೆ ನಮ್ಮನ್ನು ನೋಡಿದ ಕೂಡಲೇ ಕಂಡಕ್ಟರ್‌ಗಳು ಪಾಸ್‌ ಇರುವವರಿಗೆ ಪ್ರವೇಶವಿಲ್ಲ ಎನ್ನುತ್ತಾರೆ. ಕೇಳಿದರೆ ಅಂತರ ರಾಜ್ಯ ಬಸ್‌ ಎಂದು ಸಬೂಬು ಹೇಳುತ್ತಾರೆ. ಇದರಿಂದಾಗಿ ಬಸ್‌ ನಿಲ್ದಾಣದಲ್ಲಿಯೇ ಗಂಟೆಗಟ್ಟಲೆ ನಿಲ್ಲಬೇಕು’ ಎಂದು ವಿದ್ಯಾರ್ಥಿಗಳು ಬೇಸರಿಸಿದರು.

ADVERTISEMENT

ಕಂಡಕ್ಟರ್‌ಗಳು ಹೇಳುವುದೇನು?: ಈ ಬಗ್ಗೆ ಕಂಡಕ್ಟರ್‌ಗಳನ್ನು ಪ್ರಶ್ನಿಸಿದರೆ, ಅವರು ತಮ್ಮದೇ ಆದ ಸಬೂಬು ನೀಡುತ್ತಾರೆ. ‘ವಿದ್ಯಾರ್ಥಿಗಳ ತೊಂದರೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರಿಹಾರ ಹುಡುಕಬೇಕು. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು. ಕಂದಾಯ ಭವನ ಹಾಗೂ ಐಜೂರು ವೃತ್ತದಲ್ಲಿ ಸಂಚಾರ ನಿಯಂತ್ರಕರನ್ನು ನಿಯೋಜಿಸಬೇಕು’ ಎಂದು ಸ್ಥಳೀಯ ರವಿ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.