ADVERTISEMENT

ಪ್ರಯಾಣಿಕ ಮಹಿಳೆ ಮೇಲೆ ಹಲ್ಲೆ: ಕೆಎಸ್‌ಆರ್‌ಟಿಸಿ ನಿರ್ವಾಹಕ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಮೇ 2022, 19:53 IST
Last Updated 24 ಮೇ 2022, 19:53 IST
   

ಬೆಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದ ಆರೋಪದಡಿ ಕೆಎಸ್‌ಆರ್‌ಟಿಸಿ ನಿರ್ವಾಹಕ ಎಚ್‌. ರವಿಕುಮಾರ್ ಎಂಬುವರನ್ನ ಸೇವೆಯಿಂದ ಅಮಾನತು ಮಾಡಿ ನಿಗಮ ಆದೇಶ ಹೊರಡಿಸಿದೆ.

ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-1ರಲ್ಲಿ ರವಿಕುಮಾರ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಶೃಂಗೇರಿ– ಬೆಂಗಳೂರು ಮಾರ್ಗದ ಎ.ಸಿ ಸ್ಲೀಪರ್‌ ಬಸ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅದೇ ಬಸ್ಸಿನಲ್ಲಿ ಕೊಪ್ಪದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ, ಟಿ. ದಾಸರಹಳ್ಳಿ ಬಳಿ ಇಳಿದಿದ್ದರು. ಅವರ ಮಕ್ಕಳು ಇಳಿಯಲು ತಡವಾಗಿತ್ತು. ಅಷ್ಟಕ್ಕೆ ರವಿಕುಮಾರ್‌ ಜಗಳ ತೆಗೆದು, ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಘಟನೆ ಬಗ್ಗೆ ಬಾಗಲಗುಂಟೆ ಠಾಣೆಗೆ ಮಹಿಳೆ ದೂರು ನೀಡಿದ್ದರು. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾದ ಮಾಹಿತಿ ಪಡೆದ ನಿಗಮ, ನಿರ್ವಾಹಕನನ್ನು ಅಮಾನತು ಮಾಡಿದೆ.

ADVERTISEMENT

‘ಮಹಿಳಾ ಪ್ರಯಾಣಿಕರ ಸುರಕ್ಷತೆ ನಿಗಮದ ಕರ್ತವ್ಯ. ಮಹಿಳಾ ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಸಂಸ್ಥೆಯು ವಿಷಾದ ವ್ಯಕ್ತಪಡಿಸುತ್ತದೆ. ಸಂಸ್ಥೆಯ ಪರವಾಗಿ ಹಿರಿಯ ಅಧಿಕಾರಿಗಳು ಮಹಿಳೆಯನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದಾರೆ’ ಎಂದೂ ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.