ADVERTISEMENT

ಕೆಎಸ್‌ಆರ್‌ಟಿಸಿಗೆ ಎಲೆಕ್ಟ್ರಿಕ್‌ ಬಸ್‌: ಶನಿವಾರದಿಂದ ಪರೀಕ್ಷಾರ್ಥ ಸಂಚಾರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 0:28 IST
Last Updated 30 ಡಿಸೆಂಬರ್ 2022, 0:28 IST
ಎಲೆಕ್ಟ್ರಿಕ್ ಬಸ್ ಸಾಂದರ್ಭಿಕ ಚಿತ್ರ
ಎಲೆಕ್ಟ್ರಿಕ್ ಬಸ್ ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾತ್ರ ಇರುವ ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಕೆಲವೇ ದಿನಗಳಲ್ಲಿ ಅಕ್ಕ–ಪಕ್ಕದ ನಗರಗಳಿಗೂ ವಿಸ್ತರಣೆ ಆಗುವ ಕಾಲ ಹತ್ತಿರವಾಗುತ್ತಿದೆ. ಕೆಎಸ್‌ಆರ್‌ಟಿಸಿಗೆ ಮೊದಲ ಎಲೆಕ್ಟ್ರಿಕ್ ಶನಿವಾರ ಬರಲಿದ್ದು, ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ.

ಗುತ್ತಿಗೆ (ಜಿಸಿಸಿ) ಆಧಾರದಲ್ಲಿ 50 ಬಸ್‌ಗಳನ್ನು ಒದಗಿಸುವ ಹೊಣೆಯನ್ನು ಹೈದರಾಬಾದ್‌ನ ಇವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಹಿಸಿಕೊಂಡಿದೆ. ವಿನ್ಯಾಸ ಸಿದ್ಧವಾಗಿದ್ದು, ಬಸ್‌ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಹೊರಟಿದೆ.

‘20 ದಿನಗಳ ಕಾಲ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿ ಯಶಸ್ವಿಯಾದರೆ ಬಾಕಿ ಬಸ್‌ಗಳನ್ನು ತರಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಬಸ್‌ಗಳ ನಿರ್ವಹಣೆ, ಚಾರ್ಜಿಂಗ್ ವ್ಯವಸ್ಥೆ ಎಲ್ಲವನ್ನೂ ಗುತ್ತಿಗೆ ಪಡೆದಿರುವ ಕಂಪನಿಯೇ ನೋಡಿಕೊಳ್ಳಲಿದೆ. ಚಾಲಕರನ್ನು ಅದೇ ಕಂಪನಿ ಒದಗಿಸಲಿದ್ದು, ಕೆಎಸ್‌ಆರ್‌ಟಿಸಿಯಿಂದ ನಿರ್ವಾಹಕರನ್ನು ನಿಯೋಜಿಸಲಾಗುತ್ತದೆ. ಬೆಂಗಳೂರಿನಿಂದ ಮೈಸೂರು, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಸುತ್ತಮುತ್ತಲ ನಗರಗಳಿಗೆ ಈ ಬಸ್‌ಗಳನ್ನು ನಿಯೋಜಿಸುವ ಆಲೋಚನೆಯಲ್ಲಿ ಕೆಎಸ್‌ಆರ್‌ಟಿಸಿ ಇದೆ.

ನಿಗಮಕ್ಕೆ ಬರಲಿರುವ ಎಲೆಕ್ಟ್ರಿಕ್ ಬಸ್ ಮತ್ತು ಹೊಸ ಹೈಟೆಕ್ ಡೀಸೆಲ್ ಬಸ್‌ಗಳಿಗೆ ಹೆಸರು ಸೂಚಿಸಲು ಕೆಎಸ್‌ಆರ್‌ಟಿಸಿ ಕೇಳಿದ್ದು, ಇದಕ್ಕೆ 20 ಸಾವಿರ ಮಂದಿ ಪ್ರತಿಕ್ರಿಯಿಸಿ ಹೆಸರು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.