ADVERTISEMENT

ಅಭಯಾರಣ್ಯದಲ್ಲಿ ಅಪರಾತ್ರಿ ಸಿಕ್ಕ ಅಪರಿಚಿತ ಮಹಿಳೆ, ಮುಂದೇನಾಯ್ತು?

ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 7:42 IST
Last Updated 29 ಆಗಸ್ಟ್ 2019, 7:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಅದು ಆಗಸ್ಟ್ 26ರ ಮಧ್ಯರಾತ್ರಿ. ಬೆಂಗಳೂರು–ಮುನ್ನಾರ್ ನಡುವೆ ಸಂಚರಿಸುವ ‘ಕೆಎ-57–ಎಫ್-3779’ ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ಸು ಚಿನ್ನರ್ ಅಭಯಾರಣ್ಯ ಮಾರ್ಗವಾಗಿ ಸಂಚರಿಸುತ್ತಿತ್ತು. ಏಕಾಏಕಿ ಅಪರಿಚಿತ ಪುರುಷನೊಬ್ಬ ಕೈ ಸನ್ನೆ ಮೂಲಕ ಬಸ್ಸು ನಿಲ್ಲಿಸುವಂತೆ ಮನವಿ ಮಾಡಿದ್ದು ಕಾಣಿಸಿತು. ಜತೆಗೊಬ್ಬರು ಮಹಿಳೆಯೂ ಇದ್ದರು.

ಮಧ್ಯರಾತ್ರಿ ಹೊತ್ತು. ಕ್ಷಣ ಕಾಲ ಯೋಚಿಸಿದ ಚಾಲಕಪವನಕುಮಾರ್ ಟಿ.ಎಸ್. ಅವರು ಕೊನೆಗೂ ಬಸ್ಸು ನಿಲ್ಲಿಸಿದರು. ಈ ವೇಳೆ ಮಹಿಳೆಯನ್ನು ಬಸ್ಸಿಗೆ ಹತ್ತಿಸಿದಅಪರಿಚಿತ ವ್ಯಕ್ತಿಯು ಆಕೆಯನ್ನು ಜನಸಂದಣಿ ಇರುವ ಪ್ರದೇಶ ತಲುಪಿಸುವಂತೆ ಕೋರಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಬಳಿಕ ಚಾಲಕ/ನಿರ್ವಾಹಕ ಕೆ.ಎ.ಶೇಖರ ಗೌಡ ಟಿಕೆಟ್ ಪಡೆಯುವಂತೆ ಮಹಿಳೆಗೆ ಸೂಚಿಸಿದಾಗ ಆಕೆಯ ಬಳಿ ಹಣ ಇಲ್ಲದಿರುವುದೂ ಗಮನಕ್ಕೆ ಬಂದಿದೆ. ವಿಚಾರಿಸಿದಾಗ ಆಕೆ ರಾಯಚೂರಿನ ಮಹಿಳೆ ಎಂಬುದು ತಿಳಿಯುತ್ತದೆ.ಈ ವೇಳೆ ಸ್ವಂತ ಹಣದಿಂದ ಟಿಕೆಟ್‌ ನೀಡಿ, ಊಟದ ವ್ಯವಸ್ಥೆಯನ್ನೂ ಮಾಡಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಹಿಳೆಯನ್ನು ಬೆಂಗಳೂರಿನವರೆಗೂ ಕರೆತಂದಿದ್ದಾರೆ.

ನಗರಕ್ಕೆ ಬಂದ ಬಳಿಕ, ತನ್ನ ಹೆಸರು ಜಯಶ್ರೀ ಎಂದು ತಿಳಿಸಿದ ಮಹಿಳೆಯು ತಂದೆಯ ದೂರವಾಣಿ ಸಂಖ್ಯೆಯನ್ನೂ ಸಿಬ್ಬಂದಿಗೆ ನೀಡಿದ್ದಾರೆ. ಕೂಡಲೇಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕೆಯ ತಂದೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ, ಆಕೆ ಖಿನ್ನತೆಯಿಂದ ಬಳಲುತ್ತಿರುವ ವಿಚಾರ ತಿಳಿದುಬಂದು ಆಕೆಯನ್ನುವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಪೊಲೀಸರ ಸಮ್ಮುಖದಲ್ಲಿ ಮಹಿಳೆಯನ್ನು ಅವರ ತಂದೆಯ ಸುಪರ್ದಿಗೆ ಒಪ್ಪಿಸಲಾಗಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮಾನವೀಯತೆಗೆ ಈಗ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗಿದೆ.

ಪವನಕುಮಾರ್ ಮತ್ತುಶೇಖರ ಗೌಡ ಅವರ ಸಮಯೋಚಿತ ಸಹಾಯ ಇತರ ಸಿಬ್ಬಂದಿಗೆ ಮಾದರಿ ಎಂದು ಪ್ರಶಂಸಿಸಿರುವ ಕೆಸ್‌ಆರ್‌ಟಿಸಿ, ಇಬ್ಬರಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.