ADVERTISEMENT

ಮೇ 4 ರ ಬಳಿಕ ವೇತನ ಪರಿಷ್ಕರಣೆ: ಮುಷ್ಕರ ಕೈಬಿಡಲು ಸಾರಿಗೆ ಸಿಬ್ಬಂದಿಗೆ ಸವದಿ ಮನವಿ

ಮುಷ್ಕರ ಕೈಬಿಡಲು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 15:35 IST
Last Updated 5 ಏಪ್ರಿಲ್ 2021, 15:35 IST
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ   

ಬೆಂಗಳೂರು: ‘ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ಧವಿದ್ದು, ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಪ್ರಕಟಿಸಲು ಸಾಧ್ಯವಿಲ್ಲ. ಆದರೆ, ಮೇ 4 ರ ಬಳಿಕ ವೇತನ ಹೆಚ್ಚಿಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಮುಷ್ಕರದಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಮತ್ತು ಸಾರಿಗೆ ಸಂಸ್ಥೆಯ ಇಂದಿನ ಸ್ಥಿತಿಗತಿ ಗಮನದಲ್ಲಿ ಇಟ್ಟುಕೊಂಡು, ಇದೇ 7 ರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರ ಕೈಬಿಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವೇತನ ಪರಿಷ್ಕರಣೆಗೆ ಸರ್ಕಾರ ತೀರ್ಮಾನಿಸಿದೆ. ಹಣಕಾಸು ಇಲಾಖೆಯೂ ಒಪ್ಪಿಕೊಂಡಿದೆ. ಚುನಾವಣಾ ಆಯೋಗದ ಒಪ್ಪಿಗೆ ಇಲ್ಲದೇ ವೇತನ ಪರಿಷ್ಕರಣೆ ವಿಷಯ ಪ್ರಕಟಿಸುವಂತಿಲ್ಲ. ಆಯೋಗ ಒಪ್ಪಿಗೆ ನೀಡಿದರಷ್ಟೇ ನಾವು ಪ್ರಕಟ ಮಾಡಬಹುದು. ಮೇ 4 ರಂದು ಚುನಾವಣಾ ನೀತಿ ಸಂಹಿತೆ ಮುಗಿಯಲಿದ್ದು, ಆ ಬಳಿಕ ನೀಡಲಾಗುವುದು’ ಎಂದರು.

ADVERTISEMENT

‘ಸಾರಿಗೆ ನೌಕರರು ಆರನೇ ವೇತನ ಆಯೋಗದ ವರದಿ ಜಾರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಹೆಚ್ಚುವರಿ ಸವಲತ್ತು ಕೊಡುತ್ತಿದ್ದೇವೆ. ಓವರ್‌ ಟೈಂ ಜತೆಗೆ, ಕಂಡಕ್ಟರ್‌ಗಳಿಗೆ ಶೇ 2 ರಷ್ಟು ಪ್ರೋತ್ಸಾಹ ಧನ ನೀಡುತ್ತಿದ್ದೇವೆ. 6 ನೇ ವೇತನ ಆಯೋಗಕ್ಕೆ ಸಮಾನ ವೇತನ ನೀಡಿದರೆ, ಹೆಚ್ಚುವರಿ ಸವಲತ್ತುಗಳನ್ನು ನಿಲ್ಲಿಸಬೇಕಾಗುತ್ತದೆ. ಹೀಗೆ ಮಾಡಿದರೆ ಒಂದು ಕೈಯಿಂದ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಂಡಂತಾಗುತ್ತದೆ’ ಎಂದು ಅವರು ತಿಳಿಸಿದರು.

‘ಕೋವಿಡ್‌ಗೆ ಮೊದಲು ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ದಿನವೂ 1 ಕೋಟಿ ಜನ ಪ್ರಯಾಣ ಮಾಡುತ್ತಿದ್ದರು. ಈಗ ಅದು 60 ಲಕ್ಷಕ್ಕೆ ಇಳಿದಿದೆ. ಸಂಸ್ಥೆಗೆ ಬರುತ್ತಿದ್ದ ಆದಾಯವೂ ಕಡಿಮೆ ಆಗಿದೆ. ನಾಲ್ಕು ನಿಗಮಗಳಿಂದ ಪ್ರತಿವರ್ಷ ₹3,200 ಕೋಟಿ ನಷ್ಟವಾಗುತ್ತಿದೆ. ಸಿಬ್ಬಂದಿಯ ವೇತನ ಹೆಚ್ಚಳ ಮಾಡಿದರೆ ಸಂಸ್ಥೆಯ ಮೇಲೆ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಆದರೂ ವೇತನ ಪರಿಷ್ಕರಣೆ ಸೇರಿದಂತೆ ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಿಸಲಾಗಿದೆ’ ಎಂದರು.

‘ನೌಕರರು ಕೇಳುತ್ತಿರುವುದರಲ್ಲಿ ನ್ಯಾಯವಿದೆ. ಆದರೆ, ಕೇಳುತ್ತಿರುವ ಸಂದರ್ಭ ಸರಿ ಇಲ್ಲ. ಇದನ್ನು ಅವರು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮಲ್ಲಿ ಹಣವಿದ್ದೂ ಕೊಡದೇ ಇದ್ದರೆ ಅವರ ಆರೋಪ ಒಪ್ಪಬಹುದಿತ್ತು. ಇತ್ತೀಚಿನ ವಿದ್ಯಮಾನಗಳ ಬಗ್ಗೆ ಅವರಿಗೆ ತಿಳಿವಳಿಕೆ ಇದೆ ಎಂದು ನಂಬಿದ್ದೇನೆ’ ಎಂದರು.

ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ₹30 ಲಕ್ಷ ಪರಿಹಾರ, ಅಂತರ್‌ ನಿಗಮ ವರ್ಗಾವಣೆ ಸೇರಿ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸವದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.