ADVERTISEMENT

ಸಾರಿಗೆ ನಿಗಮದ ನೌಕರರ ವೇತನ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 23:50 IST
Last Updated 14 ಡಿಸೆಂಬರ್ 2025, 23:50 IST
<div class="paragraphs"><p>ವೇತನ (ಸಾಂದರ್ಭಿಕ ಚಿತ್ರ)</p></div>

ವೇತನ (ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಬೆಂಗಳೂರು: ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ADVERTISEMENT

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಿಗಮಗಳ ಆಡಳಿತ ಮಂಡಳಿ ಮತ್ತು ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು.

ನೌಕರರ ಹಿಂಬಾಕಿ ನೀಡುವುದು, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಆಗಸ್ಟ್‌ನಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಹೈಕೋರ್ಟ್‌ನ ಸೂಚನೆಯ ಮೇರೆಗೆ ಮುಷ್ಕರ ಕೈಬಿಡಲಾಗಿತ್ತು. ಆ ನಂತರ ಮಾತುಕತೆ ನಡೆಸಿದರೂ 2024 ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಒಪ್ಪಿಲ್ಲ. 39 ತಿಂಗಳ ಹಿಂಬಾಕಿ ನೀಡಬೇಕಿದ್ದು, 14 ತಿಂಗಳ ಹಿಂಬಾಕಿ ನೀಡಲಷ್ಟೇ ಒಪ್ಪಿದೆ. ಹಿಂಬಾಕಿ ಪೂರ್ಣ ನೀಡಬೇಕು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು ಎಂಬ ಒಪ್ಪಂದ ಮುರಿಯಬಾರದು. ಶೇ 25ರಷ್ಟು ವೇತನ ಹೆಚ್ಚಳ ಮಾಡಿ 2024ರಿಂದಲೇ ಜಾರಿ ಮಾಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

‘ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು’ ಎಂದು ಸಾರಿಗೆ ಸಚಿವರು ತಿಳಿಸಿದರು.

‘ನಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳದೇ ಇದ್ದರೆ ಅನಿವಾರ್ಯವಾಗಿ ಹೋರಾಟ, ಮುಷ್ಕರ ನಡೆಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.