ADVERTISEMENT

ಪುಟ್ಟಣ್ಣ ಕುಟುಂಬದ 10–12 ಮಂದಿಗೆ ಕ್ಲಾಸ್ ವನ್‌ ನೌಕರಿ ಕೊಡಿಸಿದ್ದೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:40 IST
Last Updated 20 ಅಕ್ಟೋಬರ್ 2020, 2:40 IST
   

ರಾಮನಗರ: ‘ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ 10-12 ಜನಕ್ಕೆ ಕ್ಲಾಸ್ ವನ್‌ ಅಧಿಕಾರಿಗಳ ಕೆಲಸ ಕೊಡಿಸಿದ್ದೇನೆ. ನನ್ನಿಂದ ಉಪಕಾರ ಪಡೆದುಕೊಂಡ ವ್ಯಕ್ತಿ ಈಗ ನನ್ನ ಬಗ್ಗೆಯೇ ತುಚ್ಛವಾಗಿ ಮಾತನಾಡುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಶಿಕ್ಷಕರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. '1999-2000ರಲ್ಲಿ ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಕರು-ಉಪನ್ಯಾಸಕರ ನೇಮಕಾತಿ ನಡೆದಿತ್ತು. ಆಗ ಕೃಷ್ಣ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದರು. ಅಂತಿಮ ಸಂದರ್ಶನಕ್ಕೆ ಬಂದಿದ್ದ ವ್ಯಕ್ತಿಗಳ ಹೆಸರನ್ನೂ ನಾನು ನೋಡಿರಲಿಲ್ಲ. ಅವರಲ್ಲಿ ಯಾರೂ ನನ್ನನ್ನು ನೇರವಾಗಿ ಭೇಟಿ ಮಾಡಿರಲಿಲ್ಲ. ಆದರೆ ಈ ವ್ಯಕ್ತಿ ಅವರಿವರ ಅರ್ಜಿ ಹಿಡಿದು ಇದೊಂದು ಕೆಲಸ ಮಾಡಿ ಕೊಡಿ ಅಣ್ಣ ಎಂದು ನನ್ನ ಬಳಿ ಅಲೆಯುತ್ತಿದ್ದರು. ಹೀಗೆ ನೂರಾರು ಮಂದಿಗೆ ಉದ್ಯೋಗ ಕೊಡಿಸಿಕೊಂಡಿದ್ದಾರೆ’ ಎಂದು ಹರಿಹಾಯ್ದರು.

‘ಆ ವ್ಯಕ್ತಿಗೆ ನಾನೇ ಈ ಹಿಂದೆ ಬಿಡಿಎ ಸೈಟ್‌ ಕೊಡಿಸಿದ್ದೆ. ಈಗ ಅಲ್ಲೇ 70-80 ಕೋಟಿ ರೂಪಾಯಿ ಮೌಲ್ಯದ ಶಿಕ್ಷಣ ಸಂಸ್ಥೆ ಕಟ್ಟಿಕೊಂಡಿದ್ದಾನೆ ಎಂದು ಬಲ್ಲವರು ಹೇಳುತ್ತಾರೆ’ ಎಂದು ಪುಟ್ಟಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.