ADVERTISEMENT

ಡಿವಿಜಿ ಕಗ್ಗದಿಂದ ಕುಮಾರಸ್ವಾಮಿ ಬಜೆಟ್‌ ಮಂಡನೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 7:33 IST
Last Updated 8 ಫೆಬ್ರುವರಿ 2019, 7:33 IST
ಕುಮಾರಸ್ವಾಮಿ ಬಜೆಟ್‌ ಮಂಡನೆ
ಕುಮಾರಸ್ವಾಮಿ ಬಜೆಟ್‌ ಮಂಡನೆ   

ಬೆಂಗಳೂರು: ದೋಸ್ತಿ ಸರ್ಕಾರದ ಎರಡನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ವಿರೋಧ ಪಕ್ಷಗಳಿಂದ ತೀವ್ರ ಅಡ್ಡಿ ವ್ಯಕ್ತಪಡಿಸಲಾಗುತ್ತಿದೆ.

ವಿರೋಧ ಪಕ್ಷದ ನಾಯಕರು ಮೇಜು ಕುಟ್ಟಿ ಬಜೆಟ್‌ಗೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಇದರ ಮಧ್ಯೆಯೇ 260 ದಿನಗಳ ಸರ್ಕಾರದ ಸಾಧನೆಗಳನ್ನು ಕುಮಾರಸ್ವಾಮಿ ಬಣ್ಣಿಸಿದರು.

ಮಂಕುತಿಮ್ಮನ ಕಗ್ಗ ಹೇಳಿ ಭಾಷಣದಲ್ಲಿ ಬಡವರಿಗೆ ಆಸರೆಯಾಗುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು. ರಾಜ್ಯವನ್ನು ಸಮಾನವಾಗಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದರು.

ADVERTISEMENT

2001ರಿಂದ ಈವರೆಗೆ 14 ವರ್ಷ ಬರಗಾಲ ಇತ್ತು. ಈ ವರ್ಷ ಕೊಡಗು ಸೇರಿದಂತೆ ವಿವಿಧೆಡೆ ಅತಿವೃಷ್ಟಿ ಸಂಭವಿಸಿದೆ. ಪ್ರಕೃತಿ ವಿಕೋಪಕ್ಕೆ ಸ್ಪಂದಿಸುವ ಜೊತೆಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಜನರ ಆಶೋತ್ತರ ಈಡೇರಿಲು ಸರ್ಕಾರ ಯತ್ನಿಸಿದೆ ಎಂದು ಹೇಳಿದರು.

‘ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ ರಕ್ಷಣಾ ಪಡೆ ಸಿಬ್ಬಂದಿ ಮತ್ತು ಜನರ ಸಹಾಯವನ್ನು ನೆನೆಯುತ್ತೇನೆ. ₹2000 ಕೋಟಿಗೆ ಮನವಿ ಸಲ್ಲಿಸಿದ್ದರೂ ಕೇಂದ್ರದಿಂದ ಸಿಕ್ಕಿದ್ದು, ಕೇವಲ ₹900 ಕೋಟಿ’ ಎಂದು ತಿಳಿಸಿದರು.

‘ಬೆಳೆಸಾಲ ಮನ್ನಾವನ್ನು ಯಶಸ್ವಿಯಾಗಿ, ಪಾರದರ್ಶಕವಾಗಿ ಜಾರಿ ಮಾಡುತ್ತಿದ್ದೇವೆ. ಅನ್ನದಾತರಿಗೆ ನಾವು ನೀಡುವ ಗೌರವ ಹೊನ್ನಶೂಲದಂತೆ ಅಗಿದೆ. ನಮ್ಮ ಸರ್ಕಾರದ ನಡೆ ರೈತಪವಾಗಿದೆ. ರೈತರ ನೋವಿಗೆ ಮಿಡಿದು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯು ಸಂಕಲ್ಪ ಮಾಡಿದ್ದೇವೆ’ ಎಂದು ಭರವಸೆ ನೀಡಿದರು.

‘ವಾಣಿಜ್ಯ ಬ್ಯಾಂಕ್‌ಗಳ ಅಸಹಾರಕ್ಕೆ ನಾವು ಜಗ್ಗಲಿಲ್ಲ. ಈವರೆಗೆ ಸಾಲಮನ್ನಾ ಯೋಜನೆಯಡಿ 12 ಲಕ್ಷ ಸಾಲಖಾತೆಗಳಿಗೆ ₹5000 ಕೋಟಿ ಬಿಡುಗಡೆ ಮಾಡಲಾಗಿದೆ.ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಸಾಲಮನ್ನಾದಿಂದಲೇ ರೈತರ ಸಂಕಷ್ಟ ಪರಿಹಾರವಾಗುವುದಿಲ್ಲ ಎನ್ನುವ ವಿಚಾರ ನಮಗೆ ಗೊತ್ತಿದೆ. ಮಾರುಕಟ್ಟೆ–ಗೋದಾಮು–ಕೃಷಿಪದ್ಧತಿ ಸುಧಾರಣೆಗೂ ಯತ್ನಿಸುತ್ತಿದ್ದೇವೆ’ ಎಂದರು.

‘ಇಸ್ರೇಲ್ ಮಾದರಿ, ಸಾವಯವ, ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಪದ್ಧತಿ ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದೇವೆ. ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ರೈತರಿಂದಲೇ ಪರಿಹಾರ ಕಂಡುಕೊಳ್ಳಲು ರೈತರ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಬಜೆಟ್‌ ಭಾಷಣದಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.