ADVERTISEMENT

ಎರಡು ವರ್ಷದಲ್ಲಿ ನಮ್ಮದೇ ಸರ್ಕಾರ; ಕಡಿಮೆ ಶುಲ್ಕದಲ್ಲಿ ‘ಎ‘ ಖಾತಾ: HDK ಭರವಸೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 10:48 IST
Last Updated 25 ಅಕ್ಟೋಬರ್ 2025, 10:48 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

ಬೆಂಗಳೂರು: ಬಿ ಖಾತಾಯಿಂದ ಎ ಖಾತಾ ಮಾಡಿಕೊಡುತ್ತೇವೆ ಎಂದು ಪ್ರತಿ ನಿವೇಶನಕ್ಕೆ ₹5 ಲಕ್ಷದಿಂದ ₹30 ಲಕ್ಷದವರೆಗೆ ಸುಲಿಗೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಯಾರೂ ಇದಕ್ಕಾಗಿ ಹಣ ಚೆಲ್ಲಬೇಡಿ, ಮೋಸ ಹೋಗಬೇಡಿ. ಎರಡು ವರ್ಷದ ನಂತರ ನಮ್ಮ ಸರ್ಕಾರ ಬರುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಎ ಖಾತಾ ಮಾಡಿಕೊಡುತ್ತೇವೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು’ ಎಂದರು.

ADVERTISEMENT

‘ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರತಿ ಚದರ ಅಡಿಗೆ ₹110 ನಿಗದಿ ಮಾಡಿ, ಈ ಕೆಲಸ ಮಾಡಿಕೊಡಲು ಆದೇಶ ಹೊರಡಿಸಿದ್ದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಪ್ರತಿ ಚರ ಅಡಿಗೆ ₹200ರಿಮದ ₹600ರವರೆಗೆ ಶುಲ್ಕ ನಿಗದಿ ಮಾಡಿದ್ದೆವು. ಈ ಸರ್ಕಾರವು ಪ್ರತಿ ಚದರ ಅಡಿಗೆ ಸಾವಿರಾರು ರೂಪಾಯಿಗಳಂತೆ ಲಕ್ಷ ಲಕ್ಷ ಲೂಟಿ ಹೊಡೆಯಲು ಮುಂದಾಗಿದೆ’ ಎಂದರು.

‘ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿಯೊಬ್ಬರು, ಅವರ ನಿವೇಶನದ ಖಾತೆಯನ್ನು ‘ಎ’ ಪರಿವರ್ತಿಸಿಕೊಳ್ಳಲು ₹25 ಲಕ್ಷ ಪಾವತಿಸಬೇಕಿದೆ. ಬಡವರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಎರಡು ವರ್ಷದಲ್ಲಿ ನಮ್ಮದೇ ಸರ್ಕಾರ’

‘ಈ ಸರ್ಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಐದು ವರ್ಷ ನನಗೆ ಆಡಳಿತ ನೀಡಿದರೆ ಎಲ್ಲವನ್ನೂ ಸರಿ ಮಾಡುತ್ತೇನೆ. ಈ ಹಿಂದೆ ನೀಡಲಿಲ್ಲ. ಆದರೆ ಈ ಬಾರಿ ಖಂಡಿತಾ ಸರ್ಕಾರ ರಚಿಸುತ್ತೇವೆ. ಕಾಂಗ್ರೆಸ್‌ ಸರ್ಕಾರ ತಂದಿರುವ ಬಿಯಿಂದ ಎ ಖಾತಾ ಪರಿವರ್ತನೆಯನ್ನು ಅತ್ಯಂತಕಡಿಮೆ ವೆಚ್ಚದಲ್ಲೇ ಮಾಡಿಕೊಡುತ್ತೇವೆ’ ಎಂದು ಕುಮಾರಸ್ವಾಮಿ ಹೇಳಿದರು.

‘ನಮ್ಮದು ಸ್ವತಂತ್ರ ಸರ್ಕಾರ ಬರುತ್ತದೆಯೋ ಅಥವಾ ಮೈತ್ರಿ ಸರ್ಕಾರ ಬರುತ್ತದೆಯೋ ಎಂಬುದನ್ನು ಜನರು ನಿರ್ಧರಿಸಲಿದ್ದಾರೆ. ಈ ಕ್ಷಣದವರೆಗೂ ಜೆಡಿಎಸ್‌–ಬಿಜೆಪಿ ಮೈತ್ರಿ ಚೆನ್ನಾಗಿಯೇ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚರ್ಚಿಸಲು ಯೋಗ್ಯತೆ ಇಲ್ಲ’

ಖಾತಾ ಪರಿವರ್ತನೆ ಬಗ್ಗೆ ಬಹಿರಂಗ ಚರ್ಚೆಗೆ ಡಿ.ಕೆ.ಶಿವಕುಮಾರ್ ಅವರು ಆಹ್ವಾನ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ‘ಬಿ ಮತ್ತು ಎ ಖಾತಾ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಲು ಅವರು ಯಾರು? ನನ್ನನ್ನು ಚರ್ಚೆಗೆ ಕರೆಯುವ ಅಥವಾ ಚರ್ಚಿಸುವ ಯೋಗ್ಯತೆ ಆ ವ್ಯಕ್ತಿಗೆ ಇಲ್ಲ. ಅವರು ಎಲ್ಲೆಲ್ಲಿ ಏನೇನೂ ಲೂಟಿ ಹೊಡೆದಿದ್ದಾರೆ ಎಂಬುದನ್ನು ಬಿಟ್ಟಿಡುತ್ತೇನೆ’ ಎಂದು ಕುಮಾರಸ್ವಾಮಿ ಅವರು ಉತ್ತರಿಸಿದರು.

‘ರಾಜ್ಯಕ್ಕೆ ಕೈಗಾರಿಕೆ ತರುವುದು ನನ್ನ ಕೆಲಸವೇ? ಅದು ರಾಜ್ಯ ಸರ್ಕಾರದ್ದು. ಕೇಂದ್ರ ಸರ್ಕಾರದ ಕೈಗಾರಿಕಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ. ಬೆಂಗಳೂರಿಗೆ 4,500 ಇ–ಬಸ್‌ಗಳನ್ನು ನೀಡಿದ್ದೇನೆ. ಬೇರೆ ಯಾವ ರಾಜ್ಯಕ್ಕೂ ಇಷ್ಟು  ದೊಡ್ಡಸಂಖ್ಯೆಯಲ್ಲಿ ಬಸ್‌ಗಳನ್ನು ನೀಡಿಲ್ಲ. ಕೈಗಾರಿಕೆಗಳು ಬರುವಂತಹ ವಾತಾವರಣ ನಿರ್ಮಿಸುವುದು ಬಿಟ್ಟು, ಬೇರೆ ಏನೇನೋ ಮಾಡಿಕೊಂಡು ಕೂತಿದ್ದಾರೆ. ಅವರೊಂದಿಗೆ ಏನು ಚರ್ಚಿಸಬೇಕು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.