ಆನೆಗಳು ಆಂಧ್ರಕ್ಕೆ ಹಸ್ತಾಂತರ
ಬೆಂಗಳೂರು: ಆಂಧ್ರಪ್ರದೇಶದಲ್ಲಿ ಆನೆ– ಮಾನವ ಸಂಘರ್ಷ ತಹಬದಿಗೆ ತರಲು ಕರ್ನಾಟಕದ ತರಬೇತುಗೊಂಡ ನಾಲ್ಕು ಕುಮ್ಕಿ ಆನೆಗಳನ್ನು ಬುಧವಾರ ಆಂಧ್ರಕ್ಕೆ ಹಸ್ತಾಂತರಿಸಲಾಯಿತು. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಆನೆಗಳ ಹಸ್ತಾಂತರದ ದಾಖಲೆ ಪತ್ರಗಳನ್ನು ಸ್ವೀಕರಿಸಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರಖಂಡ್ರೆ ಮತ್ತು ಇತರರು ಇದ್ದರು. ಹೂವುಗಳಿಂದ ಅಲಂಕೃತಗೊಂಡಿದ್ದ ಆನೆಗಳು ಸಾಲಾಗಿ ಸೊಂಡಿಲೆತ್ತಿ ಪ್ರಣಾಮ ಸಲ್ಲಿ ಸಾಗಿದವು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪವನ್ ಕಲ್ಯಾಣ್ ಅವರು ಆನೆಗಳ ಮೇಲೆ ಪುಷ್ಪ ವೃಷ್ಟಿ ಮಾಡಿದರು.
ಆಂಧ್ರದ ಜತೆ ಆಗಿರುವ ಒಪ್ಪಂದದ ಪ್ರಕಾರ ಆರು ಆನೆಗಳ ಪೈಕಿ ನಾಲ್ಕು ಆನೆಗಳನ್ನು ಹಸ್ತಾಂತರಿಸಲಾಗಿದ್ದು, ಅವುಗಳನ್ನು ಚಿತ್ತೂರು ಕಾಡಿಗೆ ಒಯ್ಯಲಾಗುವುದು. ಈ ಆನೆಗಳು ತರಬೇತಿ ಪಡೆದಿದ್ದು, ಕಮಾಂಡ್ ಕೊಡಲಾಗಿದೆ. ಕಾಡನೆಗಳನ್ನು ಓಡಿಸುವುದು, ನಿರ್ದಿಷ್ಟ ಪ್ರದೇಶಕ್ಕೆ ತಳ್ಳುವುದು ಮತ್ತು ಪುಂಡಾನೆಗಳನ್ನು ಹಿಡಿಯುವ ತರಬೇತಿ ಪಡೆದಿವೆ. ಆಂಧ್ರದ ಸುಮಾರು 25 ಮಾವುತರು/ಕಾವಡಿಗಳಿಗೆ ಈ ಕುರಿತ ಜ್ಞಾನ ನೀಡುವ ಸಂಬಂಧ ಒಂದು ತಿಂಗಳ ತರಬೇತಿಯನ್ನೂ ನೀಡಲಾಗಿದೆ. ಅಲ್ಲದೇ, ಆಬೆ ಹಿಡಿಯುವುದು, ಮಾನವ– ಆನೆ ಸಂಘರ್ಷಣೆ ನಿಭಾಯಿಸುವುದು ಮುಂತಾದವುಗಳ ವಿಡಿಯೊಗಳನ್ನೂ ಆಂಧ್ರ ಪ್ರದೇಶದ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಆನೆಗಳ ಮೇಲೆ ನಿಗಾ: ‘ಆನೆಗಳ ಆರೋಗ್ಯ ಮತ್ತು ಅವುಗಳ ತೂಕದ ಬಗ್ಗೆ ಆಂಧ್ರಪ್ರದೇಶ ಪ್ರತಿ ವರ್ಷ ರಾಜ್ಯಕ್ಕೆ ವರದಿ ನೀಡಬೇಕು. ಇದರಿಂದ ಆನೆಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತದೆ. ಇಲ್ಲಿಂದ ಕಳುಹಿಸಿದ ಆನೆಗಳು ಅಲ್ಲಿನ ಅರಣ್ಯ ಮತ್ತು ಪರಿಸರದಲ್ಲಿ ಹೊಂದಿಕೊಳ್ಳಲು ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸುದ್ದಿಗಾರರಿಗೆ ತಿಳಿಸಿದರು.
‘ದಸರಾ ಆನೆಗಳನ್ನು ಮೈಸೂರಿಗೆ ವೀರನಹೊಸಹಳ್ಳಿಯಿಂದ ಕಳುಹಿಸುವಾಗ ಪೂಜೆ ಮಾಡಿ ಕಳಿಸ ಲಾಗುತ್ತಿದೆ. ಅದೇ ರೀತಿ ಆಂಧ್ರಕ್ಕೆ ನೀಡುತ್ತಿರುವ ಆನೆಗಳಿಗೂ ಪೂಜೆ ಸಲ್ಲಿಸಲಾಗಿದೆ. ಇದು ಆನೆಗಳ ಬಗ್ಗೆ ಕರ್ನಾಟಕ ರಾಜ್ಯಕ್ಕೆ ಇರುವ ಪ್ರೀತಿ, ವಾತ್ಸಲ್ಯದ ಪ್ರತೀಕ’ ಎಂದರು.
‘ಪ್ರಕೃತಿ- ಕನ್ನಡಿ ಎರಡೂ ಒಂದೇ. ಕನ್ನಡಿ ಇರುವ ರೂಪವನ್ನೇ ನಿಮಗೆ ತೋರಿಸುತ್ತದೆ. ನೀವು ಪ್ರಕೃತಿ ರಕ್ಷಿಸಿದರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ನಾವು ಮರವನ್ನು ರಕ್ಷಿಸಿದರೆ ಮರ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಾವೆಲ್ಲರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ’ ಎಂದು ಖಂಡ್ರೆ ಅವರು ತೆಲುಗಿನಲ್ಲಿ ಪದ್ಯದ ಸಾಲನ್ನು ಹೇಳಿ ಕನ್ನಡದಲ್ಲಿ ಅರ್ಥ ವಿವರಿಸಿದರು.
ಹಸ್ತಾಂತರಗೊಂಡ ಆನೆಗಳು...
ಕೃಷ್ಣ (15 ವರ್ಷ): 2022 ರಲ್ಲಿ ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿತ್ತು
ಅಭಿಮನ್ಯು (14 ವರ್ಷ): 2023 ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾಗಿತ್ತು
ದೇವ (39 ವರ್ಷ): ಕುಶಾಲನಗರದಲ್ಲಿ 2019 ರಲ್ಲಿ ಸೆರೆ ಹಿಡಿಯಲಾಗಿತ್ತು.
ರಂಜನ್ (26 ವರ್ಷ): ದುಬಾರೆಯಲ್ಲೇ ಜನಿಸಿತ್ತು.
‘ಮಾತುಕತೆಗೆ ಸಮಯ ನಿಗದಿ ಮಾಡಿಸಿ’
‘ತುಂಗಾಭದ್ರಾ ನದಿಯ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಜತೆ ಸಭೆಗೆ ಸಮಯ ನಿಗದಿ ಮಾಡಿಕೊಡಿ’ ಎಂದು ಪವನ್ ಕಲ್ಯಾಣ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.
‘ಆಂಧ್ರ ಮತ್ತು ನಮ್ಮ ರಾಜ್ಯದ ಸಂಬಂಧ ಇನ್ನೂ ಉತ್ತಮವಾಗಲಿ. ನಮ್ಮ ಪಾಲಿನ 24 ಟಿಎಂಸಿ ಅಡಿ ನೀರಿನ ಬಳಕೆ ಬಗ್ಗೆ ನಿಮ್ಮ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಬೇಕಿದೆ. ನೀವೇ ಮುಂದೆ ನಿಂತು ಸಭೆ ನಿಗದಿ ಮಾಡಿ’ ಎಂದು ಹೇಳಿದರು.
‘ಜಯ ಭಾರತ ಜನನಿಯ ತನುಜಾತೆ’ ಎಂದ ಪವನ್ ಕಲ್ಯಾಣ್
‘ಜಯ ಭಾರತ ಜನನಿಯ ತನುಜಾತೆ...’ ಮೂಲಕ ತಮ್ಮ ಭಾಷಣ ಆರಂಭಿಸಿದ ಪವನ್ ಕಲ್ಯಾಣ್ ಅವರು, ಕುವೆಂಪು ಅವರ ‘ಅಮೃತವಾಣಿ’ ಕವಿತೆಯ ‘ಅರಣ್ಯ ಹಾಡು ಹಾಡುವ ಮುನ್ನ..’.ಸಾಲುಗಳನ್ನು ವಾಚಿಸಿ ಸಭಿಕರ ಮನ ಗೆದ್ದರು.
‘ನಾವು ಬೇರೆ ರಾಜಕೀಯ ಪಕ್ಷಗಳ ಗುಂಪುಗಳಿಗೆ ಸೇರಿದ್ದರೂ, ನಾವು ಮೊದಲು ಭಾರತೀಯರು ಎಂಬ ಚಿಂತನೆ ಹೊಂದಿರುವವರು. ನಮ್ಮ ಅರಣ್ಯ ಮತ್ತು ಪರಿಸರದ ಸಂರಕ್ಷಣೆಯಲ್ಲಿ ಸಹೋದರ ರಾಜ್ಯಗಳಾದ ನಾವು ಪಣ ತೊಟ್ಟಿದ್ದೇವೆ. ಎರಡೂ ರಾಜ್ಯಗಳ ಅರಣ್ಯ ಸುರಕ್ಷಿತವಾಗಿರಬೇಕು ಎಂದು ಪವನ್ ಕಲ್ಯಾಣ್ ತಿಳಿಸಿದರು.
‘ಪ್ರಕೃತಿ - ಕನ್ನಡಿ, ಎರಡೂ ಒಂದೇ. ಕನ್ನಡಿ ಇರುವ ರೂಪವನ್ನೇ ನಿಮಗೆ ತೋರಿಸುತ್ತದೆ. ನೀವು ಪ್ರಕೃತಿ ರಕ್ಷಿಸಿದರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ’. ಸಂಸ್ಕೃತದಲ್ಲಿ ವೃಕ್ಷೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ನಾವು ಮರ ರಕ್ಷಿಸಿದರೆ ಮರ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಾವೆಲ್ಲರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ’ ಎಂದರು.
ಕುವೆಂಪು ಅವರ ಭಾವಚಿತ್ರವನ್ನು ಒಳಗೊಂಡ ಸ್ಮರಣಿಕೆಯನ್ನು ಅವರು ಸಿದ್ದರಾಮಯ್ಯ ಅವರಿಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.