
ಲಹರ್ ಸಿಂಗ್ ಸಿರೋಯಾ
ಬೆಂಗಳೂರು: ‘ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗದೇ ರಾಜ್ಯ ಸರ್ಕಾರವು ತನ್ನ ಆದಾಯದಲ್ಲಿ ₹13 ಸಾವಿರ ಕೋಟಿ ಖೋತಾ ಅನುಭವಿಸುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಸರ್ವಾಂಗೀಣ ವೈಫಲ್ಯಕ್ಕೆ ಸೂಚನೆ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಬೊಕ್ಕಸ: ₹13 ಸಾವಿರ ಕೋಟಿ ನಷ್ಟ’ ವರದಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.
‘ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ನಡೆದಿರುವ ಕಚ್ಚಾಟದ ಪರಿಣಾಮ ಆರ್ಥಿಕತೆ ಹಳಿ ತಪ್ಪಿದೆ. ಭಾರಿ ಪ್ರಮಾಣದ ಭ್ರಷ್ಟಾಚಾರ, ಕೆಟ್ಟ ನೀತಿಗೂ ಈ ವರದಿ ಕೈಗನ್ನಡಿ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಬರಿದಾಗಿದೆ ಎಂಬುದು ಸಾಮಾನ್ಯ ಜ್ಞಾನ’ ಎಂದು ಅವರು ಹೇಳಿದ್ದಾರೆ.
‘ಸಿದ್ದರಾಮಯ್ಯ ಅವರು ಜನ ಹಿತಕ್ಕಾಗಿ ಆಡಳಿತ ಮಾಡದೇ, ಸ್ವಹಿತಕ್ಕಾಗಿ ಆಡಳಿತ ಮಾಡುತ್ತಿದ್ದಾರೆ. ಇವರು ಗಿನ್ನಿಸ್ ಅಥವಾ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಸೃಷ್ಟಿಸುವುದರಿಂದ ಸಾಮಾನ್ಯ ಜನರಿಗೆ ಆಗುವ ಪ್ರಯೋಜನವಾದರೂ ಏನು? ರಾಹುಲ್‌ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಂತ್ರವಾಗಿ ಸಿದ್ದರಾಮಯ್ಯ ಅವರ ಆಡಳಿತ ನಿರ್ವಹಣೆಯ ಮಾಲ್ಯ ಮಾಪನ ಮಾಡಿಸಬಹುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.