ಬಾಗಲಕೋಟೆ: ರಾಜ್ಯದಲ್ಲಿ ಕೆರೆ ಸಂರಕ್ಷಣಾ ಪ್ರಾಧಿಕಾರ ರಚನೆಯಾಗಿ 10 ವರ್ಷಗಳಾಗಿವೆ. ಆದರೆ, ಇನ್ನೂ 12,246 ಕೆರೆಗಳ ಒತ್ತುವರಿ ಸರ್ವೆ ಕಾರ್ಯ ಪೂರ್ಣವಾಗಿಲ್ಲ. ಈಗಾಗಲೇ ಸರ್ವೆ ಆದ ಕೆರೆಗಳ ಪೈಕಿ 5,559 ಕೆರೆಗಳ ಒತ್ತುವರಿ ತೆರವು ಆಗಿಲ್ಲ.
ರಾಜ್ಯದಲ್ಲಿ 40,998 ಕೆರೆಗಳಿವೆ. 7.36 ಲಕ್ಷ ಎಕರೆ ವಿಸ್ತೀರ್ಣ ಹೊಂದಿವೆ. ಈವರೆಗೆ 28,752 ಕೆರೆಗಳ ಸರ್ವೆ ಆಗಿದೆ. ಅದರಲ್ಲಿ 11,059 ಕೆರೆಗಳ 34,941 ಎಕರೆ ಜಾಗ ಒತ್ತುವರಿಯಾಗಿದೆ. 16,973 ಎಕರೆ ಜಾಗ ತೆರವು ಆಗಿದೆ.
ಕೆರೆಗಳ ಒತ್ತುವರಿ ಕುರಿತು 2012ರಲ್ಲಿ ಅರ್ಜಿಯೊಂದರ ವಿಚಾರಣೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೆರೆಗಳ ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಆ ಸೂಚನೆ ಮೇರೆಗೆ 2014ರಲ್ಲಿ ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರ ರಚಿಸಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡರೂ ತೆರವು ಕಾರ್ಯ ಯಾವ ಜಿಲ್ಲೆಯಲ್ಲೂ ಪೂರ್ಣವಾಗಿಲ್ಲ. ಉಡುಪಿಯಲ್ಲಿ ಕೇವಲ 2 ಎಕರೆ ಮತ್ತು ಯಾದಗಿರಿಯಲ್ಲಿ 3 ಎಕರೆ ತೆರವು ಮಾತ್ರ ಬಾಕಿ ಇದೆ.
ಸರ್ವೆಯರ್‌ಗಳ ಕೊರತೆ: ಸರ್ವೆಯರ್‌ಗಳ ಕೊರತೆಯಿಂದ ನಿಗದಿತ ಸಮಯದಲ್ಲಿ ಕೆರೆಗಳ ಸರ್ವೆ ಕಾರ್ಯ ಪೂರ್ಣ ಆಗುತ್ತಿಲ್ಲ. ಹೊಲ, ನಿವೇಶನಗಳ ಸರ್ವೆಗೆ ಸಲ್ಲಿಸುವ ಅರ್ಜಿಗಳ ಜೊತೆಗೆ ಇವುಗಳನ್ನೂ ನಿಭಾಯಿಸಬೇಕಿದೆ.
‘ಸರ್ವೆ ಕಾರ್ಯ ಒಂದೆಡೆ ಮಂದಗತಿಯಲ್ಲಿ ನಡೆದರೆ, ಇನ್ನೊಂದೆಡೆ ಕೆರೆಗಳು ಮತ್ತೆ ಒತ್ತುವರಿ ಆಗುತ್ತಿವೆ. ಅದನ್ನು ತಪ್ಪಿಸಲು ಗಡಿ ಕಲ್ಲು ಹಾಕಿ, ಟ್ರೆಂಚ್ ನಿರ್ಮಿಸಲಾಗಿದೆ. ಕೆಲವೆಡೆ ಚೈನ್ ಲಿಂಕ್ ಫೆನ್ಸಿಂಗ್ ಸಹ ಹಾಕಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಕೆರೆಗಳ ಸಂರಕ್ಷಣೆ ಕುರಿತು ನಿಯಮಿತವಾಗಿ ಸಭೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಕೆರೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ. ಒತ್ತುವರಿ ತೆರವು ಸಹ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿ ನೆರವು ಅವಶ್ಯವಿದ್ದರೆ, ನೀಡಲು ಜಿಲ್ಲಾಡಳಿತ ಸಿದ್ಧವಿದೆ.-ಜಾನಕಿ ಕೆ.ಎಂ, ಜಿಲ್ಲಾಧಿಕಾರಿ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.