
ಬೆಂಗಳೂರು: ‘ರಾಜ್ಯದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ರೈತರು, ತಾವಾಗಿಯೇ ಅದನ್ನು ಬಿಟ್ಟುಕೊಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ತೆರವು ಮಾಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಸಣ್ಣ ನೀರಾವರಿ ಇಲಾಖೆ ಆಯೋಜಿಸಿದ್ದ ‘ನೀರಿದ್ದರೆ ನಾಳೆ– ಜಲವೇ ಜಗದ ಜೀವಾಳ’ ಜಾಗೃತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ 37 ಲಕ್ಷ ಕೊಳವೆಬಾವಿಗಳು ಅಧಿಕೃತವಾಗಿವೆ. ಇದಲ್ಲದೆ, ಅನಧಿಕೃತವಾಗಿ ಇನ್ನಷ್ಟು ಲಕ್ಷ ಕೊಳವೆಬಾವಿಗಳಿವೆ. ರಾಷ್ಟ್ರದ ಸರಾಸರಿಗಿಂತ (ಶೇಕಡ 60) ಶೇ 8ರಷ್ಟು ಹೆಚ್ಚು ಅಂತರ್ಜಲ ರಾಜ್ಯದಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ, ನೀರಿನ ಬಳಕೆ, ರಕ್ಷಣೆ ಹಾಗೂ ಅಂತರ್ಜಲ ವೃದ್ಧಿಸುವ ಬಗ್ಗೆ ಹೆಚ್ಚಿನ ಕ್ರಮವಾಗಬೇಕಿದೆ ಎಂದು ಹೇಳಿದರು.
236 ತಾಲ್ಲೂಕುಗಳಲ್ಲಿ 144 ತಾಲ್ಲೂಕುಗಳು ಮಾತ್ರ ಅಂತರ್ಜಲ ಮಟ್ಟದಲ್ಲಿ ಸುರಕ್ಷಿತ ವರ್ಗದಲ್ಲಿವೆ. 44 ತಾಲ್ಲೂಕುಗಳಲ್ಲಿ ಅತಿ ಬಳಕೆ, 14 ತಾಲ್ಲೂಕು ಕ್ಲಿಷ್ಟಕರ, 33 ತಾಲ್ಲೂಕು ಅರೆ ಕ್ಲಿಷ್ಟಕರ ವರ್ಗದಲ್ಲಿವೆ. ಈ ಕಾರಣಕ್ಕೇ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆ ಜಾರಿ ಮಾಡಲಾಯಿತು. ಇದರಿಂದ ಅಲ್ಲಿ, 200 ಅಡಿ– 300 ಅಡಿಗೆ ನೀರು ಸಿಗುವಂತಾಗಿದೆ. ಈ ಮೊದಲು 2000 ಅಡಿಯಷ್ಟು ಕೊರೆಯಬೇಕಾಗಿತ್ತು ಎಂದರು.
‘ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಂತರ್ಜಲ ವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇವೆ. ಇದರಿಂದ ಅಂತರ್ಜಲ ಉತ್ತಮವಾಗಿ ವೃದ್ಧಿಯಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಏಷ್ಯಾದಲ್ಲೇ ಮೊದಲು. ಹೊರ ರಾಜ್ಯ, ದೇಶದವರಲ್ಲೇ ಬಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ, ಇಲ್ಲಿನ ಕೆಲವರು ಇನ್ನೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.
ಜಲತಜ್ಞ ರಾಜೇಂದ್ರ ಸಿಂಗ್ ಅವರು ಮಾತನಾಡಿ, ‘ಅಂತರ್ಜಲ ಮಟ್ಟ ಅಭಿವೃದ್ದಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ತೃತೀಯ ಹಂತದ ಸಂಸ್ಕರಣೆ ಮಾಡಿ, ಕೆರೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಂಡರೆ, ಎಲ್ಲರಿಗೂ ಮಾದರಿಯಾಗಬಹುದು’ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ರಾಯಭಾರಿ, ನಟ ವಶಿಷ್ಟ ಸಿಂಹ ಮಾತನಾಡಿ, ‘ನೀರಿನ ಬಗ್ಗೆ ನಿಷ್ಕಾಳಜಿ ತೋರಿದ ಪರಿಣಾಮ ನಾವು ಅಭಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಮುಂಬರುವ ಪೀಳಿಗೆಗೆ ಆಸ್ತಿಯಲ್ಲದೆ, ನೀರಿನ ಸಂರಕ್ಷಣೆಯ ಮೂಲಕ ಮಹತ್ವದ ಕೊಡುಗೆ ನೀಡಬೇಕಾಗಿದೆ’ ಎಂದರು.
ಸಚಿವರಾದ ಎಚ್.ಕೆ.ಪಾಟೀಲ, ಈಶ್ವರ್ ಖಂಡ್ರೆ, ಎಚ್.ಸಿ. ಮಹದೇವಪ್ಪ ಉಪಸ್ಥಿತರಿದ್ದರು.
‘ಪ್ರತಿ ವರ್ಷ ಸಾವಿರ ಕೆರೆಗೆ ನೀರು’
‘ರಾಜ್ಯದಲ್ಲಿ ಪ್ರತಿ ವರ್ಷ 1018 ಕೆರೆಗಳ 25 ಲಕ್ಷ ಎಕರೆಯಲ್ಲಿ ನೀರು ತುಂಬಿಸಲಾಗುತ್ತಿದೆ. ಅಂತರ್ಜಲ ಇಲಾಖೆ ಮೂಲಕ 2714 ಪ್ರದೇಶಗಳಲ್ಲಿ ಪ್ರತಿ ಆರು ಗಂಟೆಗೊಮ್ಮೆ ಅಂತರ್ಜಲದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ‘ಡಿಸೆಂಬರ್ ವೇಳೆಗೆ 41849 ಕೆರೆಗಳ ಒತ್ತುವರಿ ತೆರವುಗೊಳಿಸಲಾಗುತ್ತದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಂದಮೇಲೆ ಎಂಟು ಸಾವಿರಕ್ಕೂ ಅಧಿಕ ಸಣ್ಣ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಂಡಿದ್ದೇವೆ’ ಎಂದರು.
‘ನೆರೆ ರಾಜ್ಯದವರು ಸಹಕರಿಸಲಿ’
‘ನಮ್ಮ ನೆರೆ ರಾಜ್ಯದವರಾದ ಮಹಾರಾಷ್ಟ್ರ ತೆಲಂಗಾಣ ಆಂಧ್ರ ಪ್ರದೇಶ ಗೋವಾ ಹಾಗೂ ತಮಿಳುನಾಡಿನವರು ನೀರಾವರಿ ಯೋಜನೆಗಳಿಗೆ ಸಹಕರಿಸಬೇಕು. ನಾವು ಎಲ್ಲರಿಗೂ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಶಿಕ್ಷಣ ಉದ್ಯೋಗ ಎಂದು ಎಲ್ಲ ರಾಜ್ಯದವರೂ ನಮ್ಮ ರಾಜ್ಯದಲ್ಲಿ ಬಂದು ನೆಲಸಿದ್ದಾರೆ. ಅವರನ್ನು ನಾವು ಸ್ವಾಗತ ಮಾಡುತ್ತಿದ್ದೇವೆ. ಅವರಿಗೆಲ್ಲ ಸೌಲಭ್ಯ ನೀಡುತ್ತಿದ್ದೇವೆ. ಇದನ್ನೆಲ್ಲ ಅರಿತು ನಮ್ಮ ಯೋಜನೆಗಳಿಗೆ ನೆರವಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.