ADVERTISEMENT

ನೀರಾವರಿ ಜಮೀನು ಬದಲು ಖರಾಬು ಜಾಗ ನೋಂದಣಿ!

ಮಧ್ಯವರ್ತಿಗಳ ಕೈಚಳಕ; ಫಲಾನುಭವಿಗಳಿಗೆ ಮೋಸ, ವರದಿ ತರಿಸಿಕೊಂಡ ಡಿ.ಸಿ.

ನಾಗರಾಜ ಚಿನಗುಂಡಿ
Published 16 ಫೆಬ್ರುವರಿ 2020, 22:22 IST
Last Updated 16 ಫೆಬ್ರುವರಿ 2020, 22:22 IST
ಫಲಾನುಭವಿಗಳಿಗೆ ಮೊದಲು ತೋರಿಸಿದ್ದ ಮಲ್ಲಿನಮಡಗು–ನಸಲಾಪುರ ಮಾರ್ಗದ ನೀರಾವರಿ ಜಮೀನು. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಪ್ರಭಾರ ವ್ಯವಸ್ಥಾಪಕರು ಈಚೆಗೆ ಭೇಟಿಕೊಟ್ಟು ಪರಿಶೀಲಿಸಿದರು
ಫಲಾನುಭವಿಗಳಿಗೆ ಮೊದಲು ತೋರಿಸಿದ್ದ ಮಲ್ಲಿನಮಡಗು–ನಸಲಾಪುರ ಮಾರ್ಗದ ನೀರಾವರಿ ಜಮೀನು. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಪ್ರಭಾರ ವ್ಯವಸ್ಥಾಪಕರು ಈಚೆಗೆ ಭೇಟಿಕೊಟ್ಟು ಪರಿಶೀಲಿಸಿದರು   

ರಾಯಚೂರು: ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ‘ಭೂ ಒಡೆತನ ಯೋಜನೆ’ಯಡಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ನೀರಾವರಿ ಜಮೀನು ತೋರಿಸಿ, ಖರಾಬು ಜಮೀನು ನೋಂದಣಿ ಮಾಡಿ ವಂಚಿಸಿರುವುದು ಮಾನ್ವಿ ತಾಲ್ಲೂಕು ಸಂಗಾಪುರದಲ್ಲಿ ನಡೆದಿದೆ.

ಈ ಯೋಜನೆಯಡಿ ಗ್ರಾಮದ 10 ಫಲಾನುಭವಿಗಳಿಗೆ ತಲಾ ಒಂದುಎಕರೆ ಭೂಮಿ ನೋಂದಣಿ ಮಾಡಿಸಲಾಗಿದೆ. ಈ ಜಮೀನು ಮಾಲೀಕರಿಗೆ ನಿಗಮದಿಂದ ಎಕರೆಗೆ₹6.35 ಲಕ್ಷದಂತೆ ಪಾವತಿಸಲಾಗಿದೆ.

‘ಮಧ್ಯವರ್ತಿಗಳುನಮಗೆ ನೀರಾವರಿ ಜಮೀನು ತೋರಿಸಿದ್ದರು. ಆದರೆ, ಕೃಷಿಗೆ ಯೋಗ್ಯವಲ್ಲದ ಬಂಡೆಗಳಿಂದ ಕೂಡಿರುವ ಜಮೀನನ್ನು ನೋಂದಣಿ ಮಾಡಿಸಿದ್ದಾರೆ. ನಿಗಮ ಪಾವತಿಸಿರುವ ಹಣದಲ್ಲಿ ನಾವು ₹3 ಲಕ್ಷ ಮರುಪಾವತಿ ಮಾಡಬೇಕು.ಎಕರೆಗೆ ₹1 ಲಕ್ಷ ಸಹ ಬೆಲೆ ಬಾಳದ ಭೂಮಿ ಪಡೆದು ₹3 ಲಕ್ಷ ಸಾಲ ಹೊತ್ತುಕೊಳ್ಳುವುದು ಬೇಕಾಗಿಲ್ಲ. ನಮಗೆ ತೋರಿಸಿದ್ದ ನೀರಾವರಿ ಜಮೀನನ್ನೇ ಕೊಡಿಸಬೇಕು’ ಎಂದು ಫಲಾನುಭವಿಗಳು ಜಿಲ್ಲಾಧಿಕಾರಿ ಮೊರೆ ಹೋಗಿದ್ದರು.

ADVERTISEMENT

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ವರದಿ ನೀಡುವಂತೆ ಕಳೆದ ವಾರ ಸೂಚಿಸಿದ್ದರು. ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕ ಸುಬ್ರಹ್ಮಣ್ಯ ಅವರು ಫಲಾನುವಿಗಳು ನೋಡಿದ್ದ ಜಮೀನು ಮತ್ತು ಅವರ ಹೆಸರಲ್ಲಿ ನೋಂದಣಿ ಮಾಡಿಸಿರುವ ಜಮೀನುಗಳಿಗೆ ಭೇಟಿ,‘ನೋಂದಣಿ ಮಾಡಿರುವ ಮಲ್ಲಿನಮಡಗು –ಗವಿಗಟ್ಟಿ ಮಾರ್ಗದ ಸರ್ವೆ ಸಂಖ್ಯೆ 126 ರ ಜಮೀನು ಕಲ್ಲುಗುಡ್ಡದಿಂದ ಕೂಡಿದೆ’ ಎಂದು ವರದಿ ನೀಡಿದ್ದಾರೆ.

‘ಫಲಾನುಭವಿಗಳು ಮೂರು ವರ್ಷಗಳ ಹಿಂದೆ ನೋಡಿದ್ದ ಜಮೀನು ಮತ್ತು ಈಗ ನೋಂದಣಿಯಾದ ಖರಾಬು ಜಮೀನು ಎರಡಕ್ಕೂ ಒಬ್ಬರೇ ಮಾಲೀಕರು. ಜಮೀನು ಮಾಲೀಕರು ಮಧ್ಯವರ್ತಿಗಳ ಅಣತಿಯಂತೆ ನಡೆದುಕೊಂಡಿದ್ದಾರೆ’ ಎಂಬುದು ಮೂಲಗಳ ಮಾಹಿತಿ.

‘ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆಯಾದ 2016-17ರಿಂದ ಇಲ್ಲಿಯವರೆಗೂ ನಿಗಮದಲ್ಲಿ ಇಬ್ಬರು ವ್ಯವಸ್ಥಾಪಕರು ಕಾರ್ಯನಿರ್ವಹಿಸಿದ್ದಾರೆ. ಮಧ್ಯವರ್ತಿಗಳೊಂದಿಗೆ ಅಧಿಕಾರಿಗಳು ಕೂಡಾ ಶಾಮೀಲಾಗಿರುವ ಶಂಕೆ ಇದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೊಳಗಾಗಿರುವ ಫಲಾನುಭವಿಗಳಿಗೆ ನ್ಯಾಯ ಕೊಡಿಸಬೇಕು’ ಎಂದು ರೈತ ಮುಖಂಡಬಸವರಾಜ ಮಾಲಿಪಾಟೀಲ ಆಗ್ರಹಿಸಿದರು.

‘ವರದಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಪ್ರತಿಕ್ರಿಯಿಸಿದರು.

*
ತುಂಗಭದ್ರಾ ಕಾಲುವೆಯಿಂದ ನೀರಾವರಿಗೊಳಪಟ್ಟಿರುವ ಒಂದು ಎಕರೆ ಭೂಮಿ ಸಿಗುತ್ತದೆ ಎಂದು ಇಬ್ಬರು ಮಧ್ಯವರ್ತಿಗಳು ಹೇಳಿದ್ದರು. ಈಗ ಬೇರೆ ಜಮೀನು ತೋರಿಸುತ್ತಿದ್ದಾರೆ. ಇದು ಮೋಸ.
-ಬುಡ್ಡಮ್ಮ ಮಲ್ಲೇಶ, ಫಲಾನುಭವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.