ADVERTISEMENT

ಕೈಗಾರಿಕೆ ಭೂಮಿ: 7 ವರ್ಷದಲ್ಲೇ ಮಾರಾಟಕ್ಕೆ ಅವಕಾಶ

‘ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ– 2020’ ರಾಜ್ಯಪತ್ರದಲ್ಲಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 19:48 IST
Last Updated 28 ಏಪ್ರಿಲ್ 2020, 19:48 IST
   

ಬೆಂಗಳೂರು: ಕೈಗಾರಿಕಾ ಉದ್ದೇಶಕ್ಕೆ ಉದ್ಯಮಿಗಳು ಪಡೆದಿದ್ದ ಭೂಮಿಯನ್ನು ಏಳು ವರ್ಷಗಳ ಬಳಿಕ ಮಾರಾಟ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ರಾಜ್ಯ ಸರ್ಕಾರ ನೀಡಿರುವ ಭೂಮಿಯನ್ನು ಕೈಗಾರಿಕೆಗಳು ಏಳು ವರ್ಷ ಬಳಕೆ ಮಾಡದಿದ್ದರೆ ಅಥವಾ ಕೈಗಾರಿಕೆ ಮುಂದುವರಿಸದಿದ್ದರೆ, ಏಳು ವರ್ಷಗಳ ಬಳಿಕ ಅದೇ ಉದ್ದೇಶಕ್ಕೆ ಮಾರಾಟ ಮಾಡಲು ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ– 2020’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಮಾರ್ಚ್‌ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ಮಂಡಿಸಿದ್ದ ಈ ಕಾಯ್ದೆ ತಿದ್ದುಪಡಿಗೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಗದ್ದಲದ ಮಧ್ಯೆಯೂ ಮಸೂದೆಗೆ ಅಂಗೀಕಾರ ಪಡೆಯಲಾಗಿತ್ತು.

ADVERTISEMENT

ಕಾಯ್ದೆಯ ಪ್ರಕರಣ 109ಕ್ಕೆ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ ಯಾವುದೇ ವ್ಯಕ್ತಿ ಕೈಗಾರಿಕೆ ಸ್ಥಾಪಿಸಲು ಸರ್ಕಾರದಿಂದ ಜಮೀನು ಪಡೆದು ಏಳು ವರ್ಷಗಳಲ್ಲಿ ಬಳಕೆ ಮಾಡದೆ ಉಳಿಸಿಕೊಂಡಿದ್ದರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮುಚ್ಚಿಸಿದರೆ, ಅಂಥ ಭೂಮಿಯನ್ನು ಸಂಬಂಧಿಸಿದ ಉದ್ಯಮಿ ಏಳು ವರ್ಷಗಳ ಬಳಿಕ ಸರ್ಕಾರದ ಅನುಮತಿ ಪಡೆದು ತಾವು ಯಾವ ಉದ್ದೇಶಕ್ಕೆ ಜಮೀನು ಪಡೆದಿದ್ದರೊ ಅದೇ ಉದ್ದೇಶಕ್ಕೆ ಇನ್ನೊಬ್ಬರಿಗೆ ಮಾರಾಟ ಮಾಡಬಹುದಾಗಿದೆ.

ಭೂಮಿ ಮಾರಾಟಕ್ಕೆ ಉದ್ಯಮಿ ಅರ್ಜಿ ಸಲ್ಲಿಸಿದ ಬಳಿಕ, ಆ ಅರ್ಜಿಯನ್ನು ಕರ್ನಾಟಕ ಕೈಗಾರಿಕೆ (ಸೌಲಭ್ಯ) ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯ ಅನುಮೋದನೆಯೊಂದಿಗೆ ಮಾರಾಟ ಮಾಡಲು ಸರ್ಕಾರ ವಿನಾಯಿತಿ ನೀಡಲಿದೆ. 2019ರ ನವೆಂಬರ್‌ 20 ರಿಂದಲೇ ಈ ತಿದ್ದುಪಡಿ ಜಾರಿಗೆ ಬಂದಿದೆ ಎಂದು ಪರಿಗಣಿಸುವಂತೆ ಕಾಯ್ದೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.