ADVERTISEMENT

ಕಿಸಾನ್ ಸಮ್ಮಾನ್‌ಗೆ ಭೂರಹಿತ ರೈತರ ಸೇರ್ಪಡೆ ಇಲ್ಲ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 16:15 IST
Last Updated 11 ಮಾರ್ಚ್ 2025, 16:15 IST
<div class="paragraphs"><p>ಕಿಸಾನ್ ಸಮ್ಮಾನ್‌</p></div>

ಕಿಸಾನ್ ಸಮ್ಮಾನ್‌

   

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಗೆ ಭೂರಹಿತ ರೈತರನ್ನು ಸೇರಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಕುಮಾರ ಜಿ.ನಾಯಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಯೋಜನೆಯಡಿ ಕೇಂದ್ರ ಸರ್ಕಾರವು ಈವರೆಗೆ 19 ಕಂತುಗಳಲ್ಲಿ ₹3.68 ಲಕ್ಷ ಕೋಟಿ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ’ ಎಂದರು. ಯೋಜನೆಯ ಭಾಗವಾಗಿಲ್ಲದ ಎಲ್ಲ ಅರ್ಹ ರೈತರಿಗೆ ವಾರ್ಷಿಕ ₹6,000 ನಗದು ಪ್ರಯೋಜನ ನೀಡಲು ಸರ್ಕಾರ ಸಿದ್ಧವಾಗಿದೆ. ಅಂತಹ ರೈತರಿಗೆ ಹಿಂದಿನ ಕಂತುಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ADVERTISEMENT

ಅಂತಹ ರೈತರನ್ನು ಗುರುತಿಸಿ ಯೋಜನೆಯಲ್ಲಿ ಸೇರಿಸಲು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಅವರು ಕೋರಿದರು. 

ಎಲ್ಲ ಅರ್ಹ ಫಲಾನುಭವಿಗಳು ಕನಿಷ್ಠ ಪ್ರಮಾಣದ ಭೂಮಿ ಹೊಂದಿರಬೇಕು. ಇ-ಕೆವೈಸಿ ಮಾಡಿಸಿಕೊಳ್ಳಬೇಕು ಮತ್ತು ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು. ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ ಎಂದು ಅವರು ಹೇಳಿದರು.

ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಭೂರಹಿತ ಕಾರ್ಮಿಕರನ್ನು ಹಾಗೂ ಬಾಡಿಗೆದಾರ ರೈತರನ್ನು ಪರಿಗಣಿಸಬೇಕು ಎಂದು ಕುಮಾರ ನಾಯಕ ಆಗ್ರಹಿಸಿದರು. 

2011ರ ಜನಗಣತಿಯ ಪ್ರಕಾರ, ದೇಶದಲ್ಲಿ 26.3 ಕೋಟಿ  ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ 14.43 ಕೋಟಿ ಜನರು ಕೃಷಿ ಕಾರ್ಮಿಕರು ಹಾಗೂ 11.87 ಕೋಟಿ ಜನರು ಕೃಷಿಕರು ಎಂದು ಗುರುತಿಸಲಾಗಿದೆ. ಇದಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅವರಿಗೆ ಆರ್ಥಿಕ ಭದ್ರತೆ ಒದಗಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.