ADVERTISEMENT

ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2025, 9:57 IST
Last Updated 31 ಡಿಸೆಂಬರ್ 2025, 9:57 IST
   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಆ ಬಗ್ಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವರು, 'ನಮ್ಮ ದೇಶದಲ್ಲಿ ಎಲ್ಲರಿಗೂ ವ್ಯವಸ್ಥೆ ಮತ್ತು ಕಾನೂನು ಒಂದೇ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ' ಎಂದಿದ್ದಾರೆ.

'ನನಗೆ ಆಶ್ಚರ್ಯವಾಗಿದ್ದೇನೆಂದರೆ, ನಾನು ಸಲ್ಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನ್ನನ್ನು ಆಶ್ಚರ್ಯಗೊಳಿಸುತ್ತಿದೆ. ನಾನು ನೀಡಿದ ದೂರು ಅಷ್ಟು ಮುಖ್ಯವಾದುದಲ್ಲವೇ ಅಥವಾ ಅದಕ್ಕೆ ಪ್ರಾಮುಖ್ಯತೆಯೇ ಇಲ್ಲವೇ' ಎಂದು ಪ್ರಶ್ನಿಸಿದ್ದಾರೆ.

ADVERTISEMENT

'ನನ್ನ ಪರ ವಕೀಲರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ವಿಚಾರಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇಂದು ನಾನೇ ಖುದ್ದಾಗಿ ಹೋಗಿ ಅವರಿಗೆ ನೆನಪಿಸಬೇಕಾಯಿತು. ಈ ವಿಳಂಬವು ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವದಿಂದಾಗಿ ಆಗಿಲ್ಲ ಎಂದು ನಾನು ಭಾವಿಸುತ್ತೇನೆ. ನ್ಯಾಯವು ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು. ನಾನು ಇನ್ನೂ ಕಾಯುತ್ತಿದ್ದೇನೆ. ಇದನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಆ ಪೋಸ್ಟ್‌ನ್ನು ಬೆಂಗಳೂರು ನಗರ ಪೊಲೀಸ್‌, ಕರ್ನಾಟಕ ಸರ್ಕಾರ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

ಏನಿದು ಪ್ರಕರಣ

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಜಯಲಕ್ಷ್ಮಿ ನೀಡಿದ್ದ ದೂರು ಆಧರಿಸಿ, ಯೋಗಿ ಕಿಚ್ಚ, ಮಿ.ಅನಾಥ, ಮಹಿ ಕಿಚ್ಚ, ವಿರಾಟ್ ಕಿಚ್ಚ ಎಂಬ ಖಾತೆ ಸೇರಿ 18 ಇನ್‌ಸ್ಟ್ರಾಗ್ರಾಂ ಖಾತೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ದೂರಿನಲ್ಲೇನಿದೆ?:

‘ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಡೆವಿಲ್ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನು ವೇದಿಕೆಯ ಮೇಲೆ ಪತಿ ದರ್ಶನ್ ಕುರಿತು ಮಾತನಾಡಿದ್ದೆ. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಹಾಗೂ ನಮ್ಮ ಕುಟುಂಬದ ಕುರಿತು ಅಶ್ಲೀಲ ಸಂದೇಶಗಳನ್ನು ಹಾಕುತ್ತಿದ್ದಾರೆ. ಅದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಆದ್ದರಿಂದ ಅಂತಹ ಸಾಮಾಜಿಕ ಜಾಲತಾಣ ಖಾತೆಗಳ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಜಯಲಕ್ಷ್ಮಿ ದರ್ಶನ್​ ದೂರಿನಲ್ಲಿ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.