ಶಿವರಾಜ ತಂಗಡಗಿ
ಬೆಂಗಳೂರು: ‘ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ. ಕನ್ನಡ, ಕನ್ನಡಿಗರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ ಕಾನೂನು ತರುವ ಕುರಿತು ಚರ್ಚೆ ಮಾಡುತ್ತಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕರ್ನಾಟಕಕ್ಕೆ ಬಂದು ಕನ್ನಡ ಹಾಡು ಹಾಡಿ ಹಣ ಮಾಡುವಂಥವರು ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಸೋನು ನಿಗಮ್ ವಿರುದ್ಧ ಈಗಾಗಲೇ ಎಫ್ಐಆರ್ ಆಗಿದೆ. ಅವರನ್ನು ಬಂಧಿಸುವ ಕುರಿತು ಮುಖ್ಯಮಂತ್ರಿ, ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇನೆ’ ಎಂದರು.
ಸಮೀಕ್ಷೆಯಿಂದ ಗೊತ್ತಾಗಲಿದೆ:
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಸಮೀಕ್ಷೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ತಂಗಡಗಿ, ‘ಒಳ ಮೀಸಲಾತಿ ಸಮೀಕ್ಷೆಯ ವರದಿ ಬಂದ ನಂತರ ಪರಿಶಿಷ್ಟ ಜಾತಿಯ ಉಪ ಜಾತಿಗಳ ಜನಸಂಖ್ಯೆ, ಸ್ಥಿತಿಗತಿಯ ವಾಸ್ತವ ಗೊತ್ತಾಗಲಿದೆ. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ವೈಜ್ಞಾನಿಕವಾಗಿಯೇ ಮಾಡಲಾಗಿದೆ’ ಎಂದರು.
ಸತ್ತವರ ಹೆಣದ ಮೇಲೆ ರಾಜಕೀಯ:
‘ಮಂಗಳೂರಿನ ಬಜಪೆ ಬಳಿ ಕೊಲೆಯಾದ ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಮಾಡಿದ್ದು ಬಿಜೆಪಿ ಅವಧಿಯಲ್ಲಿಯೇ ಅಲ್ಲವೇ? ಆದರೆ, ಈ ಕೊಲೆ ಘಟನೆಯನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ತಂಗಡಗಿ ದೂರಿದರು.
‘ಹಿಂದೂ ಯುವಕರನ್ನು ಬಿಜೆಪಿಯವರು ದುರ್ಬಳಕೆ ಮಾಡುತ್ತಿದ್ದಾರೆ. ಇವರಿಂದ ಯಾವ ಹಿಂದೂಗಳಿಗೆ ಒಳ್ಳೆಯದಾಗಿದೆ ಹೇಳಲಿ. ಇವರ ಪ್ರಚೋದನೆಯಿಂದ ತಪ್ಪು ದಾರಿಗೆ ಹೋಗುತ್ತಿದ್ದಾರೆ. ಸತ್ತವರ ಹೆಣದ ಮೇಲೆ ರಾಜಕೀಯ ಸರಿಯೇ’ ಎಂದೂ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.