ADVERTISEMENT

ಒಳ ಮೀಸಲಾತಿ |ಸಚಿವ ಪರಮೇಶ್ವರ ನಿವಾಸದಲ್ಲಿ ಸಭೆ : ‘ಒಕ್ಕೊರಲ’ ದನಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 23:30 IST
Last Updated 2 ಆಗಸ್ಟ್ 2025, 23:30 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ಏಕ ಸದಸ್ಯ ಆಯೋಗವು ಸಲ್ಲಿಸಲಿರುವ ವರದಿಯ ವಿಚಾರದಲ್ಲಿ ಸಾಮರಸ್ಯ ಕಾಪಾಡಲು ಎಡಗೈ, ಬಲಗೈ ಸಮುದಾಯದ ಸಚಿವರು, ಶಾಸಕರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ ನಿವಾಸದಲ್ಲಿ ಔತಣಕೂಟದ ನೆಪದಲ್ಲಿ ಶನಿವಾರ ರಾತ್ರಿ ಸಭೆ ಸೇರಿದ ಎರಡೂ ಸಮುದಾಯಗಳ ಸಚಿವರು, ಶಾಸಕರು, ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಿದ್ದಾರೆ. 

ಸಭೆಯ ಬಳಿಕ ಮಾತನಾಡಿದ ಪರಮೇಶ್ವರ, ‘ಒಳ ಮೀಸಲಾತಿ ಕುರಿತು ಚರ್ಚಿಸಲು ಪರಿಶಿಷ್ಟ ಜಾತಿಗೆ ಸೇರಿದ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸಭೆ ನಡೆಸಿದ್ದೇವೆ. ನಾಗಮೋಹನ್‌ದಾಸ್‌ ಆಯೋಗ ಸದ್ಯದಲ್ಲೇ ಸರ್ಕಾರಕ್ಕೆ ವರದಿ ನೀಡಲಿದೆ. ಆ ವರದಿ ಸಲ್ಲಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಸಮುದಾಯಗಳು, ಒಳಪಂಗಡಗಳ ನಡುವೆ ಸಂಘರ್ಷ ಉಂಟಾಗದಂತೆ, ಒಟ್ಟಾಗಿ ಹೋಗಬೇಕೆಂದು ಚರ್ಚೆ ಮಾಡಿದ್ದೇವೆ’ ಎಂದರು.

ADVERTISEMENT

‘ಒಳ ಮೀಸಲಾತಿ ವಿಚಾರದಲ್ಲಿ ಏನೇ ವ್ಯತ್ಯಾಸಗಳಾದರೂ ಸರಿದೂಗಿಸಿಕೊಂಡು ಹೋಗಬೇಕೆಂಬ ತೀರ್ಮಾನಕ್ಕೆ ಎಲ್ಲರೂ ಬಂದಿದ್ದೇವೆ. ಇಲ್ಲದೆ ಹೋದರೆ ಒಳ ಮೀಸಲಾತಿ ಜಾರಿ ಮತ್ತೆ ವಿಳಂಬ ಆಗಬಹುದು. ಈ ಸಮಸ್ಯೆ ಇನ್ನಷ್ಟು ವರ್ಷ ಮುಂದಕ್ಕೆ ಹೋಗಬಹುದು. ಆ ರೀತಿ ಆಗಬಾರದು ಎಂದು ನಾವೆಲ್ಲರೂ ತೀರ್ಮಾನಕ್ಕೆ ಬಂದಿದ್ದೇವೆ. ವರದಿಯಲ್ಲಿ ಏನೇ ಇದ್ದರೂ ಚರ್ಚೆ ಮಾಡಿಕೊಂಡು ಸಹಮತದಿಂದ ಹೋಗಲು ನಿರ್ಧರಿಸಿದ್ದೇವೆ’ ಎಂದರು. 

‘ವರದಿ ಬಂದ ನಂತರ ಸ್ವಾಭಾವಿಕವಾಗಿ ಸಂಪುಟ ಸಭೆಯ ತೀರ್ಮಾನಕ್ಕೆ ಹೋಗುತ್ತದೆ. ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಅದು ಬೇರೆ ವಿಚಾರ’ ಎಂದರು.

‘ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ 101 ಜಾತಿಗಳಿಗೂ ನ್ಯಾಯ ಸಿಗಬೇಕು. ಸಣ್ಣ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಈ ಬಗ್ಗೆ ಸಚಿವರು, ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಒಳ ಮೀಸಲಾತಿಯ ವರದಿ ಸಲ್ಲಿಕೆಯಾದ ನಂತರ ಮುಖ್ಯಮಂತ್ರಿ ಭೇಟಿ ಮಾಡಿ, ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ತೀರ್ಮಾನಕ್ಕೆ ಬರಬೇಕೆಂದು ಸಲಹೆ ನೀಡುತ್ತೇವೆ’ ಎಂದು ಹೇಳಿದರು.

‘ಸಚಿವರು, ಶಾಸಕರು ಇಲ್ಲದ ಸಣ್ಣ ಸಣ್ಣ ಸಮುದಾಯಗಳಿಗೂ ನ್ಯಾಯ ಸಿಗಬೇಕಲ್ಲವೇ? ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ‌ ಮೇಲಿದೆ ಎಂಬುದನ್ನೂ ಚರ್ಚೆ ಮಾಡಿದ್ದೇವೆ. ಈ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳಬಾರದು. ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಎಂಬ ಬಗ್ಗೆಯೂ ಸಹಮತದಿಂದ ನಿರ್ಧರಿಸಿದ್ದೇವೆ’ ಎಂದೂ ತಿಳಿಸಿದರು.

ಒಳ ಮೀಸಲಾತಿ ಸಂಬಂಧಿಸಿದ ವರದಿ ವಿಚಾರದಲ್ಲಿ ಯಾವುದೇ ಗೊಂದಲ ಆಗಬಾರದೆಂದು ಚರ್ಚೆ ಮಾಡಿದ್ದೇವೆ. ವರದಿ ಬಂದ ನಂತರ ಮತ್ತೆ ಚರ್ಚೆ ಮಾಡುತ್ತೇವೆ
ಕೆ.ಎಚ್. ಮುನಿಯಪ್ಪ. ಆಹಾರ ಸಚಿವ
ಆಯೋಗವು ಆಗಸ್ಟ್ 4ರಂದು ವರದಿ ನೀಡಲಿದೆ. ಈ ಕಾರಣಕ್ಕೆ ಗೃಹ ಸಚಿವರು ಸಭೆ ಕರೆದಿದ್ದರು. ವರದಿಯ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಜಾರಿಗೆ ತರುತ್ತೇವೆ 
ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ಸಭೆಯಲ್ಲಿ ಯಾರೆಲ್ಲ ಇದ್ದರು

ಸಚಿವರು: ಜಿ. ಪರಮೇಶ್ವರ ಎಚ್.ಸಿ. ಮಹದೇವಪ್ಪ ಕೆ.ಎಚ್ ಮುನಿಯಪ್ಪ ಆರ್.ಬಿ. ತಿಮ್ಮಾಪುರ ಶಿವರಾಜ್ ತಂಗಡಗಿ.

ವಿಧಾನಸಭಾ ಉಪಾಧ್ಯಕ್ಷ: ರುದ್ರಪ್ಪ ಲಮಾಣಿ (ಹಾವೇರಿ)

ಶಾಸಕರು: ದೇವೇಂದ್ರಪ್ಪ (ಜಗಳೂರು) ಮಹೇಂದ್ರ ತಮ್ಮಣ್ಣನವರ್ (ಕುಡಚಿ) ಪಿ.ಎಂ. ನರೇಂದ್ರ ಸ್ವಾಮಿ (ಮಳವಳ್ಳಿ) ನಯನಾ ಮೋಟಮ್ಮ (ಮೂಡಿಗೆರೆ) ಎ.ಸಿ. ಶ್ರೀನಿವಾಸ್ (ಪುಲಕೇಶಿನಗರ) ಕೆ.ಎಸ್.ಬಸವಂತಪ್ಪ (ಮಾಯಕೊಂಡ) ಎಚ್‌.ವಿ. ವೆಂಕಟೇಶ್ (ಪಾವಗಡ) ದರ್ಶನ್ ದ್ರುವ ನಾರಾಯಣ್ (ನಂಜನಗೂಡು) ಎಂ. ಶಿವಣ್ಣ (ಆನೇಕಲ್) ಎನ್‌. ಶ್ರೀನಿವಾಸ್ (ನೆಲಮಂಗಲ) ಎಸ್‌.ಎನ್‌.  ನಾರಾಯಣಸ್ವಾಮಿ (ಬಂಗಾರಪೇಟೆ) ರೂಪಾಕಲಾ ಶಶಿಧರ್ (ಕೆಜಿಎಫ್) ಎ.ಆರ್. ಕೃಷ್ಣಮೂರ್ತಿ (ಕೊಳ್ಳೇಗಾಲ).

ವಿಧಾನ ಪರಿಷತ್ ಸದಸ್ಯರು; ವಸಂತ್ ಕುಮಾರ್ ಡಾ. ತಮ್ಮಯ್ಯ ಸುಧಾಮ್ ದಾಸ್‌

ಗೈರಾದವರು: ಸಚಿವ ಪ್ರಿಯಾಂಕ್ ಖರ್ಗೆ ಶಾಸಕ ಅಬ್ಬಯ್ಯ ಪ್ರಸಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.