ADVERTISEMENT

ನಾಯಕತ್ವ ಬದಲಾವಣೆ ಆಗಲೇಬೇಕು. ಮಾಡುವಂತಿದ್ದರೆ ಜುಲೈ ಒಳಗೆ ಮಾಡಿ: ನಾಯಕರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 20:47 IST
Last Updated 16 ಜೂನ್ 2021, 20:47 IST
ಅರುಣ್ ಸಿಂಗ್
ಅರುಣ್ ಸಿಂಗ್   

ಬೆಂಗಳೂರು: ‘ನಾಯಕತ್ವ ಬದಲಾವಣೆ ಆಗಲೇಬೇಕು. ಮಾಡುವಂತಿದ್ದರೆ, ಜುಲೈ ಒಳಗೆ ಮಾಡಿ. ಇಲ್ಲವಾದರೆ ಮಾಡಲೇಬೇಡಿ’ ಎಂದು ಬಿಜೆಪಿಯ ಕೆಲವು ನಾಯಕರು ಅರುಣ್‌ಸಿಂಗ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿರುವ ಸಿಂಗ್ ಅವರನ್ನು ತಡರಾತ್ರಿ ಭೇಟಿ ಮಾಡಿದ ಕೆಲವು ನಾಯಕರು ಈ ಬಗ್ಗೆ ಮಾತುಕತೆ ನಡೆಸಿದರು.

‘ಆಡಳಿತ ವೈಖರಿಯ ಲೋಪ, ಕುಟುಂಬ ಹಸ್ತಕ್ಷೇಪ, ಶಾಸಕರ ನಿರ್ಲಕ್ಷ್ಯದ ಬಗ್ಗೆ ಗಮನ ಸೆಳೆದಾಗ ತಾಳ್ಮೆಯಿಂದ ಇರಿ ಎಂದಷ್ಟೇ ಅವರು ಹೇಳಿದರು’ ಎಂದು ಹೆಸರು ಬಹಿರಂಗ ಪಡಿಸಲು ಒಪ್ಪದ ಮುಖಂಡರೊಬ್ಬರು ತಿಳಿಸಿದರು.

ADVERTISEMENT

‘ನಾಯಕತ್ವ ಬದಲಾವಣೆ ವಿಷಯದಲ್ಲಿ ಹೇಳಿಕೆ ಕೊಡುತ್ತಾ ಸುಮ್ಮನೆ ಕಾಲ ಹರಣ ಮಾಡುವುದರಿಂದ ಪ್ರಯೋಜನವಿಲ್ಲ. ಇದರಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಕುಗ್ಗುತ್ತದೆ ಎಂದು ಹೇಳಿದೆ. ಮಾತು ಆಲಿಸಿದ ಅವರು, ಸ್ಪಷ್ಟ ಭರವಸೆ ನೀಡಲಿಲ್ಲ’ ಎಂದರು.

ನಾಯಕತ್ವ ಬದಲಾವಣೆ ಯತ್ನ ನಿಜ: ಈಶ್ವರಪ್ಪ

‘ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದು ನಿಜ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವು ಶಾಸಕರು ಯಡಿಯೂರಪ್ಪನವರೇ 2 ವರ್ಷ ಮುಂದುವರಿಯಲಿ ಎಂದರೆ, ಇನ್ನು ಕೆಲವರು ಬದಲಾಯಿಸಬೇಕು ಎನ್ನುತ್ತಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ನಾಯಕತ್ವ ವಿಚಾರದಲ್ಲಿ ಏನು ಬೇಕಾದರೂ ಆಗಬಹುದು. ಪಕ್ಷದಲ್ಲಿ ಗೊಂದಲ ಇರುವುದು ನಿಜ’ ಎಂದರು.

ಭಿನ್ನಮತ ಇಲ್ಲ: ಅರುಣ್ ಸಿಂಗ್

‘ಯಡಿಯೂರಪ್ಪ ನೇತೃತ್ವದ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ’ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರು ಹಗಲು ರಾತ್ರಿ ಎನ್ನದೇ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೋವಿಡ್‌ನಿಂದ ಮೃತಪಟ್ಟ ಬಡ ಕುಟುಂಬಗಳಿಗೆ ತಲಾ ₹1 ಲಕ್ಷ ನೀಡುವ ಯೋಜನೆ ದೇಶದಲ್ಲೇ ಪ್ರಥಮ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನನಗೂ ಸಿ.ಎಂ ಆಗುವ ಆಸೆ ಇದೆ’

‘ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ, ಅದಕ್ಕೆ ಕಾಲ ಕೂಡಿಬರಬೇಕು. ಸದ್ಯಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಇನ್ನೆರಡು ವರ್ಷ ಅವರೇ ಇರುತ್ತಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

‘ಬಿಜೆಪಿಯಲ್ಲಿ ಹತ್ತಾರು ಮಂದಿ ಪರ್ಯಾಯ ನಾಯಕರಿದ್ದಾರೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಸಮಯ ಬಂದಾಗ ಅವರಿಗೆ ಅವಕಾಶ ಸಿಗುತ್ತದೆ. ಬಿಜೆಪಿ ತರಬೇತಿ ಸಂಸ್ಥೆ ಇದ್ದಂತೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.