ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ತಂತ್ರಜ್ಞಾನ ಕ್ಷೇತ್ರವನ್ನು ಬೆಂಗಳೂರಿನ ಹೊರಗೆ ವಿಸ್ತರಿಸುವ ಉದ್ದೇಶ ಹೊಂದಿರುವ ಎಲ್‌ಇಎಪಿ (ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ– ಲೀಪ್) ಕಾರ್ಯಕ್ರಮಕ್ಕೆ ₹1,000 ಕೋಟಿ ಮೀಸಲಿಡಲಾಗಿದೆ. ಇದರಿಂದ ಸ್ಥಳೀಯವಾಗಿ 5 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ತಂತ್ರಜ್ಞಾನ, ನಾವೀನ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಬಲಪಡಿಸಲು ಕರ್ನಾಟಕ ಸರ್ಕಾರವು ನ್ಯೂಜೆರ್ಸಿ ರಾಜ್ಯದ ಜೊತೆ ಮೂರು ವರ್ಷಗಳ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ’ ಎಂದರು.
‘ಈ ಒಪ್ಪಂದದಿಂದ ಪರಿಸರ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲಕ್ಕೂ ಹೆಚ್ಚು ಒತ್ತು ಸಿಗಲಿದೆ. ಜೀವವಿಜ್ಞಾನ (ಅಲೈಡ್ ಹೆಲ್ತ್ ಸೈನ್ಸ್), ಡೀಪ್ ಟೆಕ್ನಾಲಜಿ (ಸೈಬರ್ ಸೆಕ್ಯುರಿಟಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳಲ್ಲಿ ಜಂಟಿಯಾಗಿ ಯೋಜನೆಗಳನ್ನು ರೂಪಿಸಲಾಗುವುದು. ಕೌಶಲ ಸುಧಾರಣೆ ಗಮನದಲ್ಲಿ ಇಟ್ಟುಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಲ್‌ಇಎಪಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ತುಮಕೂರು, ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಮಾಹಿತಿ ತಂತ್ರಜ್ಞಾನದ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗುವುದು’ ಎಂದರು.
‘ಬೆಂಗಳೂರಿನಲ್ಲಿ ಎಲ್ಲ ಭಾಗದವರು ಕೆಲಸ ಮಾಡುತ್ತಾರೆ. ಅವರನ್ನು ಸ್ಥಳೀಯವಾಗಿ ಬಳಸಿಕೊಳ್ಳುವ ಯೋಚನೆ ಇದೆ. ಬೇರೆ ಸ್ಥಳಗಳಲ್ಲೂ ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಎಲ್‌ಇಎಪಿ 16 ಪ್ರಮುಖ ಉಪ-ಕಾರ್ಯಕ್ರಮಗಳ ಮೂಲಕ ರೂಪುಗೊಂಡಿದೆ. ಪ್ರತಿಯೊಂದು ಉಪ ಕಾರ್ಯಕ್ರಮವೂ ರಾಜ್ಯದಾದ್ಯಂತ ನವೋದ್ಯಮ ಪರಿಸರವನ್ನು ನಿರ್ಮಿಸಲು ಅಗತ್ಯವಾದ ಮೂಲಭೂತ ಅಂಶಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಸ್ಟಾರ್ಟ್‌ಅಪ್ ಫೌಂಡ್ರಿ, ನಿಧಿಗಳ ನಿಧಿಯ ರಚನೆ, ಎಲಿವೇಟ್ ನೆಕ್ಸ್ಟ್, ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ಬೆಂಗಳೂರು ಹೊರತುಪಡಿಸಿ ಎಲಿವೇಟ್ ಕಾರ್ಯಕ್ರಮ, ಇನ್ಕ್ಯುಬೇಟರ್‌ಗಳು ಮತ್ತು ಆಕ್ಸಿಲರೇಟರ್‌ಗಳ ರಚನೆ, ಕ್ಲಸ್ಟರ್‌ಗಳಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯವಾದ ಪ್ಲಗ್-ಅಂಡ್-ಪ್ಲೇ ಸಹ-ಕೆಲಸದ ಮೂಲಸೌಕರ್ಯ, ನಾವೀನ್ಯ ಪ್ರಯೋಗಾಲಯಗಳು, ನಾವೀನ್ಯ ಬೆಳೆಸುವ ಕಾರ್ಯಕ್ರಮಗಳು, ಹ್ಯಾಕಥಾನ್‌ಗಳು, ಡಿಜಿಟಲ್ ಕ್ಲಿನಿಕ್, ನಿರ್ಣಾಯಕ ಸಂಶೋಧನಾ ನಿಧಿ, ಬೂಟ್ ಕ್ಯಾಂಪ್‌ಗಳು, ಮೂಲಮಾದರಿ ಪ್ರಯೋಗಾಲಯಗಳು, ಬಿಯಾಂಡ್ ಬೆಂಗಳೂರು ಸ್ಟಾರ್ಟ್‌ಅಪ್‌ಗಳ ಸಮಾವೇಶ, ಎಲ್ಲಾ ಕಾರ್ಯಕ್ರಮ ಮಾಹಿತಿ, ಅಪ್ಲಿಕೇಶನ್‌ಗಳು ಮತ್ತು ಸಂಪರ್ಕಕ್ಕಾಗಿ ಏಕೀಕೃತ ಡಿಜಿಟಲ್ ಪೋರ್ಟಲ್ ರಚನೆ ಈ ಉಪ ಕಾರ್ಯಕ್ರಮಗಳಲ್ಲಿ ಸೇರಿದೆ’ ಎಂದರು.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಎಚ್1ಬಿ ವೀಸಾ ಶುಲ್ಕ ಹೆಚ್ಚಳ ದೇಶದ ಮೇಲೆ ಪರಿಣಾಮ ಬೀರಲಿದೆ. ಈಗ ಹೊಸಬರಿಗೆ ಮಾತ್ರ ಈ ವೀಸಾ ನಿಯಮ ಎಂದು ಅವರು ಹೇಳುತ್ತಿದ್ದಾರೆ’ ಎಂದು ಪ್ರಿಯಾಂಕ್ ಹೇಳಿದರು. ‘ಜಿಎಸ್‌ಟಿ ಉತ್ಸವ ಜನ ಮರುಳೊ ಜಾತ್ರೆ ಮರುಳೊ ಎಂಬಂತಾಗಿದೆ. ಈ ಮೊದಲು ಜಿಎಸ್‌ಟಿ ಹೆಚ್ಚಿಸಿದ್ದು ಈಗ ಇಳಿಸಿದ್ದಾರೆ. ಬಡವರನ್ನು ಬಾವಿಗೆ ತಳ್ಳಿ ಮಧ್ಯಮವರ್ಗದವರನ್ನು ನಾಶ ಮಾಡಿ ಈಗ ಜಿಎಸ್‌ಟಿ ಕಡಿಮೆ ಮಾಡಿದ್ದಕ್ಕೆ ನಾವು ಧನ್ಯವಾದ ಹೇಳಬೇಕೇ? ಜನರ ತೆರಿಗೆಯನ್ನು ವಾಪಸ್ ನೀಡುವುದಕ್ಕೆ ಪ್ರಧಾನಿ ಮೋದಿಗೆ ಏಕೆ ಧನ್ಯವಾದ ಹೇಳಬೇಕು? ಇಷ್ಟು ವರ್ಷ ಎಷ್ಟು ಆತ್ಮನಿರ್ಭರ ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.