ADVERTISEMENT

ಉಪನ್ಯಾಸಕರಿಗೆ ಶಿಕ್ಷಕರಿಗಿಂತ ಕಡಿಮೆ ವೇತನ: ಇನ್ನೂ ನೀಗದ ತಾರತಮ್ಯ

ಎರಡು ದಶಕ ಕಳೆದರೂ ಬಗೆಹರಿಯದ ವೇತನ ತಾರತಮ್ಯ ಸಮಸ್ಯೆ

ಚಂದ್ರಹಾಸ ಹಿರೇಮಳಲಿ
Published 23 ಮೇ 2025, 21:34 IST
Last Updated 23 ಮೇ 2025, 21:34 IST
.
.   

ಬೆಂಗಳೂರು: ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದ ಉಪನ್ಯಾಸಕರು, ಬಡ್ತಿ ಪಡೆಯದ ತಮ್ಮ ಸಮಕಾಲೀನ ಸಹ ಶಿಕ್ಷಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದು, ಎರಡು ದಶಕವಾದರೂ ತಾರತಮ್ಯ ನಿವಾರಣೆ ಆಗಿಲ್ಲ.

ಸರ್ಕಾರಿ ಪ್ರೌಢಶಾಲೆಗಳಿಗೆ 1992, 1994 ಹಾಗೂ 1997ರಲ್ಲಿ ನೇಮಕವಾಗಿದ್ದ ಸಹ ಶಿಕ್ಷಕರಿಗೆ ಅವರು ಪಡೆದ ಸ್ನಾತಕೋತ್ತರ ಪದವಿ ಆಧಾರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಬಡ್ತಿ ನೀಡಲಾಗಿತ್ತು. ಪಿಯು ಕಾಲೇಜುಗಳಲ್ಲಿ 34 ವಿಷಯಗಳ ಉಪನ್ಯಾಸಕ ಹುದ್ದೆಗಳಿದ್ದು, ಪ್ರೌಢಶಾಲಾ ಶಿಕ್ಷಕರು ಯಾವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೋ, ಆ ವಿಷಯಗಳ ಉಪನ್ಯಾಸಕರಾಗಿ ಬಡ್ತಿ ಪಡೆದಿದ್ದರು.

ಹೆಚ್ಚಿನ ಸಂಖ್ಯೆಯ ಶಿಕ್ಷಕರು 2005–06ನೇ ಸಾಲಿನಲ್ಲಿ ಉಪನ್ಯಾಸಕರಾಗಿ ಬಡ್ತಿ ಪಡೆದಿದ್ದು, ಬಡ್ತಿ ನೀಡುವಾಗ ₹300 ವೇತನ ಹೆಚ್ಚಳ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಅವರಿಗೆ ಕಾಲಮಿತಿ ಬಡ್ತಿಯ ಸೌಲಭ್ಯ ಸಿಕ್ಕಿಲ್ಲ. ಅವರ ಜತೆಗೇ ಪ್ರೌಢಶಾಲಾ ಸಹ ಶಿಕ್ಷಕರಾಗಿ ನೇಮಕವಾಗಿ, ನಂತರ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದವರ ಮೂಲ ವೇತನ ಇವರಿಗಿಂತ ₹10 ಸಾವಿರಕ್ಕೂ ಹೆಚ್ಚು ಇದೆ.

ADVERTISEMENT

ಕರ್ನಾಟಕ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಉಪನ್ಯಾಸಕರು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನಪರಿಷತ್‌ ಸದಸ್ಯರಿಗೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. 

ಮುಖ್ಯಮಂತ್ರಿ ಸೂಚನೆಗೂ ಇಲ್ಲ ಮನ್ನಣೆ: ಬಡ್ತಿ ಉಪನ್ಯಾಸಕರ ನಿರಂತರ ಹೋರಾಟ, ವಿಧಾನಮಂಡಲದಲ್ಲಿ ಚರ್ಚೆಯಾದ ನಂತರ 2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಅಧಿಕಾರಿಗಳ ಸಭೆ ನಡೆಸಿ, ವೇತನ ತಾರತಮ್ಯ ನಿವಾರಣೆಗೆ ಸೂಚನೆ ನೀಡಿದ್ದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಪಿ.ಸಿ. ಜಾಫರ್‌ ಅವರು ಸಹ ಶಿಕ್ಷಕರು ಹಾಗೂ ಬಡ್ತಿ ಉಪನ್ಯಾಸಕರ ವೇತನ ತಾರತಮ್ಯದ ಅಂತರ, ವೇತನ ತಾರತಮ್ಯ ನಿವಾರಣೆಗೆ ಅಗತ್ಯ ಅನುದಾನ ಕುರಿತು ವರದಿ ನೀಡಿದ್ದರು. ವರದಿ ಪ್ರಕಾರ ಆಗ ತಿಂಗಳಿಗೆ ₹46.99 ಲಕ್ಷ ಹೆಚ್ಚುವರಿ ಅನುದಾನದ ಅಗತ್ಯವಿತ್ತು. ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸುವ ಕುರಿತು ನಡಾವಳಿಯನ್ನೂ ಸಿದ್ಧಪಡಿಸಲಾಗಿತ್ತು. ಆದರೆ, ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿತ್ತು. ಇಂದಿಗೂ ಸಮಸ್ಯೆ ಬಗೆಹರಿದಿಲ್ಲ’ ಎನ್ನುತ್ತಾರೆ ಸರ್ಕಾರಿ ಪದವಿಪೂರ್ವ ಕಾಲೇಜು ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎ.ಎನ್‌. ಲಕ್ಷ್ಮಣಗೌಡ, ದಾವಣಗೆರೆ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಕಾತ್ರಿಕೆಹಟ್ಟಿ.

‘ಹಣಕಾಸು ಇಲಾಖೆಯ ನಿಯಮ 12ರ ಪ್ರಕಾರ ಒಂದೂ ಬಡ್ತಿ ಪಡೆಯದೆ ಒಂದೇ ಹುದ್ದೆಯಲ್ಲಿ ನಿರಂತರ ಕೆಲಸ ಮಾಡಿದವರಿಗೆ ಮಾತ್ರ 20, 25 ಹಾಗೂ 30 ವರ್ಷಗಳ ಕಾಲಮಿತಿ ವೇತನ ಬಡ್ತಿ ನೀಡಲು ಅವಕಾಶವಿದೆ. ಬಡ್ತಿ ಪಡೆಯದ ಶಿಕ್ಷಕರು ಈ ಸೌಲಭ್ಯ ಪಡೆದಿದ್ದು, ಮೂರು ವೇತನ ಬಡ್ತಿಯಲ್ಲಿ ಹೆಚ್ಚಳವಾಗಿದೆ. ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡಿದಾಗಲೇ ಮೂಲ ವೇತನ ಹೆಚ್ಚಳವಾಗಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ’ ಎನ್ನುವುದು ಹಣಕಾಸು ಇಲಾಖೆಯ ವಿವರಣೆ.

ವೇತನ ಆಯೋಗ ಶಿಫಾರಸು ಕಡೆಗಣನೆ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ನೇಮಿಸಿದ್ದ ಆರನೇ ವೇತನ ಆಯೋಗ ಬಡ್ತಿ ಉಪನ್ಯಾಸಕರ ವೇತನ ತಾರತಮ್ಯ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಇಂತಹದ್ದೇ ವೇತನ ತಾರತಮ್ಯ ನಿವಾರಣೆಗೆ ಶಿಫಾರಸು ಮಾಡಿತ್ತು.

ಆಯೋಗವು ತನ್ನ 2ನೇ ಸಂಪುಟ ವರದಿಯಲ್ಲಿ ಬಡ್ತಿ ಉಪನ್ಯಾಸಕರ ಕಾಲಮಿತಿ ಬಡ್ತಿಯನ್ನು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಇತ್ಯರ್ಥಕ್ಕೆ ಸೂಚಿಸಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಬಕಾರಿ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಅರಣ್ಯ ಪೊಲೀಸ್‌ ಕಾರ್ಮಿಕ ಕಾನೂನುಮಾಪನ ಶಾಸ್ತ್ರ ಸಮಾಜ ಕಲ್ಯಾಣ ಮುದ್ರಣ ಬುಡಕಟ್ಟು ಕಲ್ಯಾಣ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯ ಕೆಲ ನೌಕರರ ವೇತನ ತಾರತಮ್ಯ ಸರಿಪಡಿಸಲು ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಿ ಕನಿಷ್ಠ ₹3000ದಿಂದ ಗರಿಷ್ಠ₹10000ದವರೆಗೂ ಮೂಲ ವೇತನ ಹೆಚ್ಚಳ ಮಾಡಲಾಗಿತ್ತು. ಆದರೆ ಬಡ್ತಿ ಉಪನ್ಯಾಸಕರ ವೇತನ ತಾರತಮ್ಯಕ್ಕೆ ಆಗಲೂ ಪರಿಹಾರ ಸಿಗಲಿಲ್ಲ.

2029ಕ್ಕೆ ಎಲ್ಲರೂ ನಿವೃತ್ತಿ

ಬಡ್ತಿ ಪಡೆದ ಶೇ 75ರಷ್ಟು ಉಪನ್ಯಾಸಕರು ವೇತನ ತಾರತಮ್ಯದ ವಿರುದ್ಧ ಹೋರಾಟ ಮಾಡುತ್ತಲೇ ನಿವೃತ್ತರಾಗಿದ್ದಾರೆ. 2029ರ ವೇಳೆಗೆ ಉಳಿದ ಎಲ್ಲರೂ ನಿವೃತ್ತರಾಗಲಿದ್ದಾರೆ. ‘ಉನ್ನತ ಶಿಕ್ಷಣದ ಆಧಾರದಲ್ಲಿ ನಮ್ಮನ್ನು ಪಿಯು ಕಾಲೇಜುಗಳಿಗೆ ಕಳುಹಿಸಲಾಗಿತ್ತು. ಉಪನ್ಯಾಸಕರಾಗಿ ಹೋದವರಿಗೆ ಪ್ರಾಂಶುಪಾಲರಾಗುವ ಅವಕಾಶವೇ ಸಿಕ್ಕಿಲ್ಲ. ಪ್ರೌಢಶಾಲೆಗಳಲ್ಲೇ ಉಳಿದವರು ಮುಖ್ಯಶಿಕ್ಷಕರು ಬಿಇಒಗಳಾಗಿದ್ದಾರೆ. ಈಗಾಗಲೇ ಶೇ 75ರಷ್ಟು ಉಪನ್ಯಾಸಕರು ನಿವೃತ್ತರಾಗಿದ್ದಾರೆ.  ಈಗ ಕಾಲಮಿತಿ ಬಡ್ತಿ ನೀಡಿದರೆ ಹೆಚ್ಚಿನ ಆರ್ಥಿಕ ಹೊರೆ ಆಗದು’ ಎನ್ನುತ್ತಾರೆ ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್‌ ಡಿ.ಆರ್‌.

ಪ್ರೌಢ–ಪದವಿಪೂರ್ವ ಶಿಕ್ಷಣ ಒಂದೇ ಇಲಾಖೆ. ಕರ್ನಾಟಕ ನಾಗರಿಕ ಸೇವೆಗಳು ಹಾಗೂ ಆರ್ಥಿಕ ಇಲಾಖೆಯ ನಿಯಮಗಳ ಅನ್ವಯ ಆದೇಶ ಮಾರ್ಪಾಡು ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ನ್ಯಾಯ ಈಗಲಾದರೂ ಸಿಗಲಿ.
– ರಮೇಶ್‌ ಡಿ.ಆರ್, ಅಧ್ಯಕ್ಷ ಸರ್ಕಾರಿ ಪದವಿಪೂರ್ವ ಕಾಲೇಜು ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ

3,840: ಬಡ್ತಿ ಪಡೆದ ಉಪನ್ಯಾಸಕರು

2,860: ನಿವೃತ್ತರಾದವರು

980: ಪ್ರಸ್ತುತ ಇರುವ ಬಡ್ತಿ ಉಪನ್ಯಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.