ADVERTISEMENT

ಪರಿಷತ್‌ ಉಪಸಭಾಪತಿ ಧರ್ಮೇಗೌಡ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ: ಆತ್ಮಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 11:51 IST
Last Updated 29 ಡಿಸೆಂಬರ್ 2020, 11:51 IST
ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ
ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ    
""
"ಧರ್ಮೇಗೌಡ ಅವರು ತೆರಳಿದ್ದ ಕಾರು."
"ಉಪ ಸಭಾಪತಿ ಧರ್ಮೆಗೌಡರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆ ಶವಾಗಾರ ಸಜ್ಜು"

ಚಿಕ್ಕಮಗಳೂರು: ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ (64) ಅವರ ಮೃತದೇಹ ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿಯ ರೈಲು ಹಳಿಯಲ್ಲಿ ರಕ್ತ ಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಸಖರಾಯಪಟ್ಟಣದ ಬಳಿ ತೋಟದ ಮನೆಯಿಂದ ಸೋಮವಾರ ಸಂಜೆ ಕಾರಿನಲ್ಲಿ ತೆರಳಿದ್ದ ಧರ್ಮೇಗೌಡ ಅವರು ವಾಪಾಸಾಗಿರಲಿಲ್ಲ. ರಾತ್ರಿಯಾದರೂ ವಾಪಸ್‌ ಬಾರದಿದ್ದರಿಂದ ಮನೆಯವರು ಹುಡುಕಾಡಿದ್ದಾರೆ. ಗುಣಸಾಗರ – ಕಬ್ಳಿ ಮಾರ್ಗದ ನಡುವೆ ತಡರಾತ್ರಿ ಶವ ಪತ್ತೆಯಾಗಿದೆ.

ಡೆೆತ್‌ ನೋಟ್‌ ಪತ್ತೆ: ಧರ್ಮೇಗೌಡ ಅವರ ಮೃತದೇಹದ ಜತೆ ಡೆತ್‌ ನೋಟ್‌ ಸಿಕ್ಕಿದೆ. ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ಘಟನೆಯ ಉಲ್ಲೇಖ ಅದರಲ್ಲಿ ಇದೆ ಎನ್ನಲಾಗಿದೆ.

ADVERTISEMENT

ಧರ್ಮೇಗೌಡ ಅವರು ಬೀರೂರಿನ ಪರಿಚಯಸ್ಥರೊಬ್ಬರಿಗೆ ಸೋಮವಾರ ಸಂಜೆ ಫೋನ್‌ ಮಾಡಿ ಜನ ಶತಾಬ್ಧಿ ರೈಲಿನ ಸಮಯವನ್ನು ವಿಚಾರಿಸಿದ್ದರು. ಹುಬ್ಬಳಿಯಿಂದ ಸ್ನೇಹಿತರೊಬ್ಬರು ರೈಲಿನ್ಲಲಿ ಬರುತ್ತಿದ್ದಾರೆ ಎಂದು ಅವರಿಗೆ ತಿಳಿಸಿದ್ದರು ಎಂದು ಆಪ್ತರೊಬ್ಬರು ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ಘಟನೆಯಿಂದ ಧರ್ಮೇಗೌಡ ಅವರು ಮನನೊಂದಿದ್ದರು, ಸಹೋದರ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರೊಂದಿಗೆ ಬೇಸರ ಹಂಚಿಕೊಂಡಿದ್ದರು ಎಂದು ಧರ್ಮೇಗೌಡ ಅವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಧರ್ಮೇಗೌಡ ಅವರು ಮನೆಯಿಂದ ಕಾರಿನಲ್ಲಿ ತೆರಳಿದ್ದಾರೆ. ಗುಣಸಾಗರ ಸಮೀಪದ ರೈಲು ಹಳಿ ಕಾರು ನಿಲ್ಲಿಸುವಂತೆ ಚಾಲಕ ಧರ್ಮರಾಜ್‌ಗೆ ಹೇಳಿದ್ದಾರೆ. ಖಾಸಗಿಯಾಗಿ ಒಬ್ಬರೊಂದಿಗೆ ಮಾತನಾಡುವುದಿದೆ ಎಂದು ಚಾಲಕನಿಗೆ ತಿಳಿಸಿ ಕಾರಿನಿಂದಿಳಿದು ಹೋದವರು ವಾಪಸ್‌ ಬಂದಿಲ್ಲ ಎಂದು ಧರ್ಮೇಗೌಡ ಅವರ ಆಪ್ತರೊಬ್ಬರು ತಿಳಿಸಿದರು.

ಧರ್ಮೇಗೌಡ ಅವರಿಗೆ ಪತ್ನಿ ಮಮತಾ, ಪುತ್ರ ಸೋನಲ್‌, ಪುತ್ರಿ ಸಲೋನಿ ಇದ್ದಾರೆ.

ಧರ್ಮೇಗೌಡ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗಕ್ಕೆ ಒಯ್ಯಲಾಗಿದೆ.

ಇನ್ನಷ್ಟು ಓದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.