ಬೆಂಗಳೂರು: ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ಮೂರು ತಿದ್ದುಪಡಿ ಮಸೂದೆಗಳಿಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿತು.
ತಿದ್ದುಪಡಿ ಮಸೂದೆಗಳಿಂದ ರಾಜ್ಯದ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದು ವಿರೋಧಿಸಿ ಕಾಂಗ್ರೆಸ್‌ನ ಎಲ್ಲ ಸದಸ್ಯರು ಸಭಾತ್ಯಾಗ ಮಾಡಿದರು. ಜೆಡಿಎಸ್‌ನ ಎಲ್ಲ ಸದಸ್ಯರೂ ಮಸೂದೆಯನ್ನು ವಿರೋಧಿಸಿದರು. ಆದರೆ, ಕೆಲವರು ಸಭಾತ್ಯಾಗ ಮಾಡಿದರೆ, ಇನ್ನೂ ಕೆಲವರು ಸದನದಲ್ಲೇ ಉಳಿದರು.
ಪೌರಾಡಳಿತ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದ ‘ಕರ್ನಾಟಕ ಪೌರ ಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ–2021’ ಹಾಗೂ ‘ಕರ್ನಾಟಕ ಪೌರಸಭೆಗಳ (ಎರಡನೇ ತಿದ್ದುಪಡಿ) ಮಸೂದೆ–2021’ ಅನ್ನು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಮಂಡಿಸಿದರು. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ–2021’ ಅನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಂಡಿಸಿದರು.
ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಪ್ರತಿ ವರ್ಷವೂ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ನೀಡುವುದು, ತೆರಿಗೆ ಪರಿಷ್ಕರಣೆ ದರದಲ್ಲಿನ ಹೆಚ್ಚಳ, ತೆರಿಗೆ ಪಾವತಿ ವಿಳಂಬವಾದರೆ ತಿಂಗಲಿಗೆ ಶೇ 2ರಷ್ಟು ಬಡ್ಡಿ ವಿಧಿಸುವ ಪ್ರಸ್ತಾವವನ್ನು ಕಾಂಗ್ರೆಸ್‌ನ ಪಿ.ಆರ್. ರಮೇಶ್, ಬಿ.ಕೆ. ಹರಿಪ್ರಸಾದ್, ಸಿ.ಎಂ. ಇಬ್ರಾಹಿಂ, ನಜೀರ್ ಅಹಮ್ಮದ್, ಎಂ. ನಾರಾಯಣಸ್ವಾಮಿ, ಜೆಡಿಎಸ್‌ನ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಚ್.ಎಂ. ರಮೇಶ್ ಗೌಡ, ಗೋವಿಂದರಾಜ್ ಸೇರಿದಂತೆ ಹಲವರು ವಿರೋಧಿಸಿದರು. ಕೋವಿಡ್ ಸಾಂಕ್ರಾಮಿಕದಿಂದ ಜನರು ತೊಂದರೆಗೆ ಸಿಲುಕಿರುವುದರಿಂದ ಪ್ರಸಕ್ತ ವರ್ಷ ತೆಲಂಗಾಣ ಮಾದರಿಯಲ್ಲಿ ಶೇ 50ರಷ್ಟು ತೆರಿಗೆ ರಿಯಾಯಿತಿ ನೀಡುವಂತೆ ಆಗ್ರಹಿಸಿದರು.
ಉತ್ತರಿಸಲು ತಡವರಿಸಿದ ಸಚಿವ: ವಿರೋಧ ಪಕ್ಷಗಳ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ತಡವರಿಸತೊಡಗಿದರು. ಪಕ್ಕದಲ್ಲೇ ಇದ್ದ ಸಚಿವರಾದ ಬೈರತಿ ಬಸವರಾಜ ಮತ್ತು ಅರವಿಂದ ಲಿಂಬಾವಳಿ ಬೆಂಬಲಕ್ಕೆ ನಿಂತರು.
‘ಈಗಾಗಲೇ ಪೂರ್ಣ ತೆರಿಗೆ ಪಾವತಿಸಿರುವವರಿಗೆ ಶೇ 5ರಷ್ಟು ರಿಯಾಯತಿ ನೀಡುವುದು ತಿದ್ದುಪಡಿಯ ಮೂಲ ಉದ್ದೇಶ. ಅಲ್ಲದೇ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಪ್ರಮಾಣದಲ್ಲಿ ಹೆಚ್ಚಳ ಮಾಡುವುದಕ್ಕೆ ಪೂರಕವಾಗಿ ತಿದ್ದುಪಡಿ ತರಲಾಗಿದೆ. ಈ ಕ್ರಮದಿಂದಾಗಿ ಕೇಂದ್ರ ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುತ್ತದೆ’ ಎಂದು ಸಚಿವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.