ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಚಿರತೆ ಕಾರ್ಯಪಡೆ ರಚನೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅನುಮೋದನೆ ನೀಡಿದ್ದಾರೆ. ಕಾರ್ಯಪಡೆಯಲ್ಲಿ ಒಟ್ಟು 59 ಸಿಬ್ಬಂದಿ ಇರಲಿದ್ದಾರೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ತುಮಕೂರಿನ ಕುಣಿಗಲ್, ತಿಪಟೂರು, ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಚಿರತೆ–ಮಾನವ ಸಂಘರ್ಷ ತಪ್ಪಿಸಲು ಈ ಕಾರ್ಯಪಡೆ ಕೆಲಸ ಮಾಡಲಿದೆ. ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ 4 ತಂಡಗಳಾಗಿ ಈ ಕಾರ್ಯಪಡೆ ಕೆಲಸ ಮಾಡಲಿದೆ.
ಚಿರತೆ ಹಾವಳಿ ಹೆಚ್ಚುಇರುವ ಗ್ರಾಮಗಳಲ್ಲಿ ಗಸ್ತು, ರೈತರ ಜಮೀನು ಮತ್ತು ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡರೆ ಅದನ್ನು ಸರೆ ಹಿಡಿಯುವ ಕಾರ್ಯಾಚರಣೆ ಹೊಣೆಗಾರಿಕೆಯನ್ನು ಕಾರ್ಯಪಡೆಗೆ ನೀಡಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪಡೆಯ ಮುಖ್ಯಸ್ಥರಾಗಲಿದ್ದಾರೆ. ತಲಾ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ ಇರಲಿದ್ದಾರೆ. ಜತೆಗೆ ನಾಲ್ವರು ಉಪ ವಲಯ ಅರಣ್ಯಾಧಿಕಾರಿ, ಎಂಟು ಗಸ್ತು ಅರಣ್ಯ ಪಾಲಕರು, ಐವರು ವಾಹನ ಚಾಲಕರು ಮತ್ತು 40 ಹೊರಗುತ್ತಿಗೆ ಸಿಬ್ಬಂದಿ ಕಾರ್ಯಪಡೆಯಲ್ಲಿ ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.