ADVERTISEMENT

ಅಶೋಕ ತಮ್ಮ ಪಕ್ಷದ ಒಳಜಗಳ ಸರಿಪಡಿಸಿಕೊಳ್ಳಲಿ: ಗೃಹ ಸಚಿವ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 7:46 IST
Last Updated 9 ಸೆಪ್ಟೆಂಬರ್ 2024, 7:46 IST
<div class="paragraphs"><p> ಜಿ. ಪರಮೇಶ್ವರ್‌, ಗೃಹ ಸಚಿವ ( ಸಂಗ್ರಹ ಚಿತ್ರ)</p></div>

ಜಿ. ಪರಮೇಶ್ವರ್‌, ಗೃಹ ಸಚಿವ ( ಸಂಗ್ರಹ ಚಿತ್ರ)

   

ಬೆಂಗಳೂರು: ‘ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೆ ಏಕೆ ಬೇಕು. ಅವರ ಪಕ್ಷದಲ್ಲಿರುವ ಒಳ ಜಗಳಗಳನ್ನು ಸರಿಪಡಿಸಿಕೊಳ್ಳಲಿ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರಿಗೆ ಗೃಹ ಸಚಿವ ಜಿ. ಪರಮೇಶ್ವರ ತಿರುಗೇಟು ನೀಡಿದರು.

‘ನಾವೇನು ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಆ ಪಕ್ಷದವರೇ ಬದಲಾವಣೆ ಮಾಡುತ್ತಾರೆ’ ಎಂಬ ಅಶೋಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ನಮ್ಮ‌ ಪಕ್ಷವನ್ನು ನಾವು ನೋಡಿಕೊಳ್ಳುತ್ತೇವೆ’ ಎಂದರು.

ADVERTISEMENT

ಸಚಿವ ಎಂ.ಬಿ. ಪಾಟೀಲ ಅವರ ಮನೆಗೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಎತ್ತಿನಹೊಳೆ ಯೋಜನೆ ಕಾರ್ಯಕ್ರಮಕ್ಕೆ ಜೊತೆಯಲ್ಲೇ ಹೋಗುವ ಬಗ್ಗೆ ನಾವಿಬ್ಬರೂ ಮಾತನಾಡಿದ್ದೆವು. ನಮ್ಮ ಮನೆಗೆ ಬನ್ನಿ. ಉಪಾಹಾರ ಸೇವಿಸಿ ಇಲ್ಲಿಂದಲೇ ಹೋಗೋಣ ಎಂದು ಪಾಟೀಲರು ಹೇಳಿದ್ದರು. ಅವರ ಮನೆಯಲ್ಲಿದ್ದಾಗ ಮುಖ್ಯಮಂತ್ರಿಯವರು ಮನೆಯಿಂದ ಸಕಲೇಶಪುರಕ್ಕೆ ಹೊರಡಲು ಸಿದ್ಧವಾಗಿದ್ದಾರೆ ಎಂಬ ಮಾಹಿತಿ ಬಂತು. ನಾವು ಜೊತೆಯಲ್ಲೆ ಬರುತ್ತೇವೆ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿ ಹೋಗಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆ ಹುಟ್ಟಿಕೊಳ್ಳುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿದ್ದಾರೆ, ಆಡಳಿತ ನಡೆಯುತ್ತಿದೆ. ಕೋರ್ಟ್‌ನಲ್ಲಿ ಕೇಸ್ ಇದೆ, ಏನಾಗುತ್ತದೆ ಎಂಬುದನ್ನು ಕಾದು ನೋಡೋಣ’ ಎಂದರು.

‘ಆಡಳಿತದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಪ್ರತಿಯೊಬ್ಬ ಸಚಿವರು ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳಾಗಲಿ, ಸರ್ಕಾರದ ಕಾರ್ಯದರ್ಶಿಗಳು ಯಾರೂ ಸುಮ್ಮನೆ ಕುಳಿತಿಲ್ಲ. ಕೋರ್ಟ್‌ನಲ್ಲಿ ವಿಚಾರಣೆ ಇರುವುದರಿಂದ ಮುಖ್ಯಮಂತ್ರಿಯವರು ಇಂದು ಯಾವುದೇ ಕಾರ್ಯಕ್ರಮಕ್ಕೆ ಹೋಗಿರಲಿಕ್ಕಿಲ್ಲ‌’ ಎಂದು ಸ್ಪಷ್ಟಪಡಿಸಿದರು.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಆಕ್ಷೇಪದ ಕುರಿತು ಪ್ರತಿಕ್ರಿಯಿಸಿದ ಅವರು, ‘ಪರಿಸರದ‌ ಪ್ರಶ್ನೆ ಬರುವ ಭಾಗದಲ್ಲಿ ಕೆಲಸ ಮುಗಿದಿದೆ. ಇನ್ನೇನಿದ್ದರೂ ಬಯಲು ಸೀಮೆಯಲ್ಲಿ ಕೆಲಸ. ಪರಿಸರ ನಾಶ ಆಗುತ್ತಿದೆ ಎಂಬುದು ವನ್ಯಜೀವಿ ಮಂಡಳಿಯ ಪ್ರಶ್ನೆ. ನಾಶ ಆಗದಂತೆ ಈವರೆಗೂ ಕೆಲಸ ಮಾಡಿಕೊಂಡು ಬರಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಉತ್ತರ ನೀಡುತ್ತಾರೆ’ ಎಂದರು.

‘ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ‌ ಕಲ್ಪಿಸಲಾಗಿದೆ. ಸಚಿವರ, ಶಾಸಕರ ಮಕ್ಕಳು ಎಂಬ ಪ್ರಶ್ನೆ ಬರುವುದಿಲ್ಲ. ಸಮರ್ಥರಿದ್ದರೆ ಆಯ್ಕೆಯಾಗುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.