ADVERTISEMENT

ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕೆ ಗಮನಹರಿಸಲಿ, ರೇಸ್ ಕಡೆಗಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:38 IST
Last Updated 24 ಮಾರ್ಚ್ 2020, 10:38 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೋಗ ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಮಯದಲ್ಲಿ ಸದನವನ್ನು ಇನ್ನೂ ಮೂರ್ನಾಲ್ಕು ದಿನ ನಡೆಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ ರೇಸ್ ಕ್ಲಬ್‌ಗೆ ಸಂಬಂಧಿಸಿದ ಮಸೂದೆಗೆ ಒಪ್ಪಿಗೆ ಪಡೆಯಲು ತೋರುವ ಕಾಳಜಿಯನ್ನು ಕೊರೊನಾ ರೋಗ ತಡೆಗಟ್ಟಲು ತೋರಲಿ. ಮೂರು ತಿಂಗಳು ರೇಸ್ ಕ್ಲಬ್ ಬಂದ್ ಆದರೆ ಯಾರ ಪ್ರಾಣವೂ ಹೋಗುವುದಿಲ್ಲ. ಸರ್ಕಾರದ ಗಮನ ಸಂಪೂರ್ಣವಾಗಿ ರೋಗ ನಿರ್ಮೂಲನೆ ಕಡೆಗಿರಬೇಕೇ ಹೊರತು ರೇಸ್ ನಡೆಸುವುದರ ಮೇಲಲ್ಲ ಎಂದು ಕಿಡಿಕಾರಿದ್ದಾರೆ.

ಬಜೆಟ್ ಮೇಲಿನ ಚರ್ಚೆ ಅಪೂರ್ಣವಾಗಿದೆ ಜೊತೆಗೆ ಬೇಡಿಕೆಗಳ ಮೇಲೆ ಚರ್ಚೆ ನಡೆದು ಸಂಬಂಧಿತ ಸಚಿವರು ಉತ್ತರ ನೀಡಬೇಕು. ಇದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು ಹಾಗಾಗಿ ಬಜೆಟ್‌ಗೆ ತಿದ್ದುಪಡಿ ಮಾಡಿ ಮುಂನ 4 ತಿಂಗಳಿಗೆ ಅನ್ವಯವಾಗುವಂತೆ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆಯಲು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಮತ್ತೆ ಜೂನ್-ಜುಲೈ ತಿಂಗಳಿನಲ್ಲಿ ಅಧಿವೇಶನ ಕರೆದು ಬೇಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಬಜೆಟ್‌ಗೆ ಒಪ್ಪಿಗೆ ಕೊಡೋಣ ಎಂದು ಸಲಹೆ ನೀಡಿದರೆ ಇದನ್ನು ಒಪ್ಪಲು ಸರ್ಕಾರ ಸಿದ್ಧವಿಲ್ಲ ಎಂದು ದೂರಿದ್ದಾರೆ.

ADVERTISEMENT

ಬಜೆಟ್ ಮೇಲೆ, ಬೇಡಿಕೆಗಳ ಮೇಲೆ ಚರ್ಚೆ ನಡೆಯದಿದ್ದರೂ ಪರವಾಗಿಲ್ಲ ಎಲ್ಲಾ ಆರ್ಥಿಕ ಮಸೂದೆಗಳಿಗೆ ಒಪ್ಪಿಗೆ ನೀಡುತ್ತೇವೆ. ಅಧಿವೇಶನವನ್ನು ಇಂದೇ ಮುಂದೂಡಿ ಎಂದು ಸಲಹೆ ನೀಡಿದೆವು. ಆದರೆ, ಸರ್ಕಾರ ಇದನ್ನು ಕೂಡ ಒಪ್ಪೋಕೆ ತಯಾರಿಲ್ಲ. ಅವರು ಒಂದೇ ಸಲ ಪೂರ್ಣ ಬಜೆಟ್‌ಗೆ ಒಪ್ಪಿಗೆ ಪಡೆಯುವ ಇರಾದೆ ಹೊಂದಿದಂತಿದೆ. ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಹ ಹಲವು ತಿದ್ದುಪಡಿಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ. ನಾವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದಲ್ಲಿ ನಂಬಿಕೆಯಿಟ್ಟವರು. ಅಧಿಕಾರ ವಿಕೇಂದ್ರೀಕರಣ ತತ್ವಕ್ಕೆ ಧಕ್ಕೆಯಾಗುವಂತಹ ಯಾವೊಂದು ತಿದ್ದುಪಡಿ, ಕಾಯಿದೆಗಳಿಗೆ ನಾವೀಗ ಒಪ್ಪಿಗೆ ನೀಡಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಹಣಕಾಸು ಮಸೂದೆಗಳ ಮೇಲೆ ಚರ್ಚೆ ನಡೆಸದೆ ಅವುಗಳಿಗೆ ಒಪ್ಪಿಗೆ ಪಡೆಯುವುದು ಮತ್ತು ಸದನವನ್ನು ನಿನ್ನೆಗೆ ಮುಗಿಸುವುದಕ್ಕೆ ಮುಖ್ಯಮಂತ್ರಿಗಳು ಒಪ್ಪಿದರೂ ಕಾನೂನು ಸಚಿವರು ಒಪ್ಪಲು ಸಿದ್ಧರಿಲ್ಲ. ಇತ್ತ ಸಭಾಧ್ಯಕ್ಷರು ಕಾನೂನು ಸಚಿವರು ಹೇಳಿದ್ದಕ್ಕೆಲ್ಲಾ ತಲೆಯಲ್ಲಾಡಿಸುತ್ತಾರೆ. ಹೀಗಾದರೆ ಸದನದ ನಿರ್ಣಯಕ್ಕೇನು ಬೆಲೆ?. ವಿರೋಧ ಪಕ್ಷದವರ ಮಾತನ್ನು ಕೇಳುವ ಸೌಜನ್ಯವೇ ಇಲ್ಲದವರ ಜೊತೆ ಚರ್ಚೆ ಮಾಡುವುದು ವ್ಯರ್ಥ ಎಂಬ ಕಾರಣಕ್ಕೆ ನಮ್ಮ‌ ಪಕ್ಷ ಸದನವನ್ನು ಬಹಿಷ್ಕರಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರ ಹೇಳಿಕೆ ಅವರ ಮೂರ್ಖತನವನ್ನು ತೋರಿಸುತ್ತದೆ. ಜೀವನಾವಶ್ಯಕ ವಸ್ತುಗಳಾದ ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಕೊಳ್ಳಲು ಮನೆಯಿಂದ ಹೊರ ಹೋದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದು ಅಮಾನವೀಯ ಮತ್ತು ಖಂಡನೀಯ. ಮತ್ತೆ ಇಂತಹ ಘಟನೆಗೆ ಆಸ್ಪದ ನೀಡದೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು ಎಂದು ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.