ADVERTISEMENT

ಜ.14ರಿಂದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಆಗ್ರಹಿಸಿ ಬೃಹತ್‌ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 8:51 IST
Last Updated 10 ಡಿಸೆಂಬರ್ 2020, 8:51 IST
ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.   

ಬೆಂಗಳೂರು: ‘ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2ಎ ಮೀಸಲಾತಿ ಮತ್ತು ಬಡ ಲಿಂಗಾಯತ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಕೂಡಲಸಂಗಮದಿಂದ ವಿಧಾನಸೌಧದವರೆಗೆ ಜ. 14ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೃಷಿಯನ್ನೇ ಕುಲ ಕಸುಬನ್ನಾಗಿ ರೈತ ಕಾರ್ಮಿಕರಾಗಿ ಜೀವನ ಸಾಗಿಸುತ್ತಿರುವ ರಾಜ್ಯದ ಬಹುದೊಡ್ಡ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಹಕ್ಕೊತ್ತಾಯಿಸಿ ಅ. 28ರಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಮುಖ್ಯಮಂತ್ರಿ ದೂರವಾಣಿ ಕರೆಗೆ ಸ್ಪಂದಿಸಿ ಅಂದು ಉಪವಾಸ ಅಂತ್ಯಗೊಳಿಸಿದೆವು. ಈ ಸಂದರ್ಭದಲ್ಲಿ, ನಮ್ಮ ಬೇಡಿಕೆ ಈಡೇರಿಕೆ ನ. 28ರ ಗಡುವನ್ನು ಸರ್ಕಾರಕ್ಕೆ ನೀಡಲಾಗಿತ್ತು’ ಎಂದರು.

‘ಈ ಗಡುವು ಮುಗಿದರೂ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಬಾರದೆ ಇರುವುದರಿಂದ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಬುಧವಾರ (ಡಿ. 9) ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಸರ್ಕಾರದ ಪರವಾಗಿ ಸಭೆಗೆ ಬಂದ ಸಚಿವ ಸಿ.ಸಿ ಪಾಟೀಲ ಅವರ ಸಲಹೆಯಂತೆ ಸಮಾಜದ ಆರ್ಥಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲು ಒಪ್ಪಿಗೆ ಸೂಚಿಸಲಾಯಿತು. ಸಿ.ಸಿ. ಪಾಟೀಲ ಮತ್ತು ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿಯವರ ನೇತೃತ್ವದಲ್ಲಿ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿಯ ಭೇಟಿಯ ಬಳೀಕ ಮುಂದಿನ ಹೋರಾಟದ ರೂಪರೇಷೆ ತಯಾರಿಸಲು ಗುರುವಾರ ನಡೆದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಡಿ. 23ರಂದು ಜಗದ್ಗುರುಗಳ ಜನ್ಮದಿನೋತ್ಸವ ಮತ್ತು ರೈತ ದಿನಾಚಾರಣೆ ಕಾರ್ಯಕ್ರಮವನ್ನು ಈ ಬಾರಿ ಕೂಡಲಸಂಗಮದಲ್ಲಿ ಹಾಗೂ ರಾಜ್ಯಾದಾದ್ಯಂತ, ‘ಕೊಡುತ್ತೇವೆ ರಕ್ತವನ್ನು, ಪಡೆಯುತ್ತೇವೆ ಮೀಸಲಾತಿಯನ್ನು’ ಎಂಬ ಅಭಿಯಾನದಲ್ಲಿ ರಕ್ತ ದಾಸೋಹ ಮಾಡುವ ಮೂಲಕ ಆಚರಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.