ADVERTISEMENT

ಮೀಸಲಾತಿಗೆ ಅಲ್ಲ, ಲಿಂಗಾಯತ ಧರ್ಮ ಮಾನ್ಯತೆಗೆ ಬೆಂಬಲ: ಸಾಣೇಹಳ್ಳಿಶ್ರೀ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:08 IST
Last Updated 8 ಫೆಬ್ರುವರಿ 2021, 17:08 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಹೊಸದುರ್ಗ: ‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಇದಕ್ಕೆ ಮಾನ್ಯತೆ ಕೊಡುವಂತೆ ಸರ್ಕಾರಕ್ಕೆ ಶಾಸಕರು ಒತ್ತಡ ತಂದರೆ ಅದಕ್ಕೆ ನಮ್ಮ ಬೆಂಬಲವಿದೆಯೇ ಹೊರತು ಮೀಸಲಾತಿಗಾಗಿ ಅಲ್ಲ. ಎಲ್ಲರೂ ಮೀಸಲಾತಿ ಬೇಕು ಎಂದು ಒತ್ತಡ ತಂದರೆ ಸರ್ಕಾರ ಏನು ಮಾಡಲು ಸಾಧ್ಯ? ದುಡಿಯುವ ವರ್ಗ ಹೆಚ್ಚಾಗುವಂತೆ, ಬೇಡುವ ವರ್ಗ ಕಡಿಮೆಯಾಗುವಂತೆ ಯೋಜನೆಗಳನ್ನು ಸರ್ಕಾರ ಕೈಗೊಳ್ಳಲಿ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಸೋಮವಾರ ನಡೆದ ‘ಹಳೆ ಬೇರು ಹೊಸ ಚಿಗುರು-ದವಸ ಸಮರ್ಪಣೆ’ ಮತ್ತು ‘ಹಿರಿಯ ಚೇತನಗಳಿಗೆ ಅಭಿನಂದನೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ನಾವು ಸಕಲಜೀವಾತ್ಮರಿಗೆ ಲೇಸ ಬಯಸುವ ಬಸವ ಪರಂಪರೆಯಲ್ಲಿ ಬೆಳೆದು ಬಂದಿರುವವರು. ಇಲ್ಲಿ ಯಾವ ಜಾತಿ, ಪಂಗಡಗಳೂ ಇಲ್ಲ. ಇಲ್ಲಿ ಇರುವುದು ದುಡಿಯುವ ಮತ್ತು ದುಡಿದುದನ್ನು ಹಂಚಿ ತಿನ್ನುವ ವರ್ಗ. ಮೀಸಲಾತಿಗಾಗಿ ಕೈಯೊಡ್ಡುವುದು ಬೇಡ. ಕಾಯಕವೇ ಕೈಲಾಸವೆಂದು ಕೆಲಸ ಮಾಡೋಣ. ಸಾಧು ಸಮಾಜ ತುಂಬ ಕೆಳಮಟ್ಟದಲ್ಲಿ ಇದ್ದವರು. ಇಂತಹ ಸಮಾಜವನ್ನು ನಮ್ಮ ಹಿರಿಯ ಗುರುಗಳು ದುಡಿಯುವ ವರ್ಗವನ್ನಾಗಿ ಮಾಡಿ ಮೇಲೆತ್ತಿದರು. ಇದೇ ಪರಂಪರೆಯನ್ನು ನಮ್ಮ ಪೀಠ ಮುಂದುವರಿಸಿಕೊಂಡು ಬಂದಿದೆ. ತತ್ವಾದರ್ಶಗಳು ಕೇವಲ ವೇದಿಕೆಯ ಮೇಲಿನ ಮಾತಾಗದೆ ನಡವಳಿಕೆಯಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.