ಜಿ ಎಸ್ ಸಂಗ್ರೇಶಿ
ಬೆಂಗಳೂರು: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಪತ್ರ ಕಡ್ಡಾಯಗೊಳಿಸಿ ಸರ್ಕಾರ ಕಾನೂನು ತಂದರೆ ನಾವು ಅದೇ ರೀತಿ ಚುನಾವಣೆ ಮಾಡಬೇಕಾಗುತ್ತದೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಮತಪತ್ರ ಅಥವಾ ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಮೂಲಕ ಚುನಾವಣೆ ನಡೆಸಬಹುದು ಎಂಬುದು ಕಾಯ್ದೆಯಲ್ಲೇ ಇದೆ’ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದೆ. ವಿಳಂಬಕ್ಕೆ ನಾವು ಕಾರಣ ಅಲ್ಲ. ಸರ್ಕಾರದಿಂದ ಮೀಸಲಾತಿ ಪಟ್ಟಿ ಬರಬೇಕಿದೆ’ ಎಂದರು.
‘188 ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಅವಧಿ ಅಕ್ಟೋಬರ್‌ನಲ್ಲಿ ಮುಗಿಯಲಿದೆ. ಅವುಗಳಿಗೂ ಚುನಾವಣೆ ನಡೆಸಬೇಕಿದೆ. ಮೀಸಲಾತಿ ಪಟ್ಟಿಯನ್ನು ಸರ್ಕಾರ ಯಾಕೆ ಕೊಟ್ಟಿಲ್ಲ ಎಂಬುದು ಅರ್ಥ ಆಗಿಲ್ಲ’ ಎಂದೂ ಹೇಳಿದರು.
‘ಎರಡು ವಾರಗಳ ಹಿಂದೆ ಹೈಕೋರ್ಟ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಷಯ ವಿಚಾರಣೆಗೆ ಬಂದಿತ್ತು. ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಿದೆ ಎಂದು ಕೋರ್ಟ್‌ಗೆ ಸರ್ಕಾರ ಹೇಳಿದೆ. ನಂತರ ಚುನಾವಣೆ ನಡೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.