ADVERTISEMENT

ಕೋವಿಡ್‌ | ರಾಜ್ಯದಲ್ಲಿ ಜೂನ್‌ 14ರ ವರೆಗೂ ಲಾಕ್‌ಡೌನ್‌ ವಿಸ್ತರಣೆ, ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದ ಬಿಎಸ್‌ವೈ

ಕೋವಿಡ್‌ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇನ್ನು ಒಂದು ವಾರ ಲಾಕ್‌ಡೌನ್‌ ವಿಸ್ತರಣೆ ಮಾಡಿ, ವಿವಿಧ ವಲಯಗಳಿಗೆ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದರು.

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 13:49 IST
Last Updated 3 ಜೂನ್ 2021, 13:49 IST

ಕೈಗಾರಿಕೆಗಳಿಗೆ ಪರಿಹಾರ

MSME ಕೈಗಾರಿಕೆಗಳಿಗೆ ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕಗಳನ್ನು (Fixed charges) ಪಾವತಿಸುವುದರಿಂದ ವಿನಾಯಿತಿಯನ್ನು ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 114.70 ಕೋಟಿ ಹೆರೆಯಾಗುತ್ತದೆಂದು ಅಂದಾಜಿಸಿದೆ. 

MSME ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕ ಪಾವತಿಸುವುದನ್ನು ದಿನಾಂಕ:30-7-2021 ರವರೆಗೆ ಮುಂದೂಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 5.56 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ.

ಈ ಎರಡು ಕ್ರಮಗಳಿಂದ ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.

ADVERTISEMENT

ನ್ಯಾಯವಾದಿಗಳಿಗೆ ಪರಿಹಾರ

ನ್ಯಾಯವಾದಿಗಳ ಕಲ್ಯಾಣ ನಿಧಿಗೆ ರೂ 5 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು. 

ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡುವ ಬಗ್ಗೆ

ಈ ಸಮಯದಲ್ಲಿ ಹಾಲಿನ ಬೇಡಿಕೆ ಕಡಿಮೆಯಾಗಿದ್ದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡ ರೈತರಿಗೆ ಸಮಸ್ಯೆಯಾಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಎಲ್ಲಾ ಶಾಲೆಗಳು ಲಾಕ್‍ಡೌನ್‍ನಿಂದ ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದ್ದು ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 100 ಕೋಟಿ ವೆಚ್ಚವಾಗಲಿದೆ. 

ಅಂಗನವಾಡಿ ಕಾರ್ಯಕರ್ತೆಯರು

64,423 ಅಂಗನವಾಡಿಯ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ ರೂ 2,000 ಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 24.7 ಕೋಟಿ ವೆಚ್ಚವಾಗಲಿದೆ.
 

ಆಶಾ ಕಾರ್ಯಕರ್ತೆಯರು

ಆಶಾ ಕಾರ್ಯಕರ್ತೆಯರು ಕೋವಿಡ್-19ನ ಸೋಂಕನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ವರ್ಗದವರಿಗೆ ಸಹಾಯ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಸರ್ಕಾರವು ಕೋವಿಡ್-19 ತಡೆಗಟ್ಟುವಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ತಲಾ ರೂ 3,000 ಗಳ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಒಟ್ಟು 42,574 ಆಶಾ ಕಾರ್ಯಕರ್ತರಿಗೆ ಸಹಾಯವಾಗಲಿದ್ದು ಅಂದಾಜು ರೂ 12.75 ಕೋಟಿ ವೆಚ್ಚವಾಗಲಿದೆ.

ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳು

ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡಿಗೆ ಕೆಲಸಗಾರರು ಮತ್ತು ಸಿಬ್ಬಂದಿಗಳಿಗೆ ತಲಾ ರೂ 3,000 ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು ಇದರಿಂದ ರೂ 10.8 ಕೋಟಿ ವೆಚ್ಚವಾಗಲಿದೆ.

ಮೀನುಗಾರರಿಗೆ ಪರಿಹಾರ

ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ ರೂ 3000 ಗಳ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 5.6 ಕೋಟಿ ವೆಚ್ಚವಾಗಲಿದೆ.

ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದಲ್ಲಿನ ಅಸಂಘಟಿತ ಕಾರ್ಮಿಕರು

ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು ರೂ 6.6 ಕೋಟಿ ವೆಚ್ಚವಾಗಲಿದೆ.

ಪವರ್ ಲೂಮ್ ನೇಕಾರರು

ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್‍ಗಳಿಗೆ 35 ಕೋಟಿ ವೆಚ್ಚವಾಗಲಿದೆ. 

ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್​ ಶೇ.5ಕ್ಕಿಂತ ಕಡಿಮೆಯಾದರೆ ರಿಲೀಫ್ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಗ್ಗಗಳ ಕಾರ್ಮಿಕರು, ಚಲನಚಿತ್ರ, ದೂರದರ್ಶನ ಕಲಾವಿದರು ಮೀನುಗಾರ, ಅರ್ಚಕರು, ಅಡುಗೆ ಕೆಲಸಗಾರರು, ಆಶಾ ಕಾರ್ಯಕರ್ತೆಯರಿಗೂ ತಲಾ ₹3000, ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ತಲಾ ₹2000,ಪ್ರಾಥಮಿಕ ಅನುದಾನರಹಿತ ಶಿಕ್ಷಕರಿಗೆ ತಲಾ 5000 ರೂ ಪ್ಯಾಕೇಜ್​ನ್ನು ಸಿಎಂ ಯಡಿಯೂರಪ್ಪ ಘೋಷಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡನೇ ಹಂತದಲ್ಲಿ ಸುಮಾರು ₹500 ಕೋಟಿ ಪ್ಯಾಕೇಜ್​ ಘೋಷಣೆ ಮಾಡಿದರು,

ಹೋಟೆಲ್​ಗಳು ಸಂಜೆಯವರೆಗೂ ತೆರೆಯಬಹುದು. ಆದರೆ ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ 

ಜೂನ್‌ 14ರ ಸೋಮವಾರ ಬೆಳಗ್ಗೆ 6ರ ವರೆಗೂ ಲಾಕ್‌ಡೌನ್‌ ವಿಸ್ತರಣೆಯಾಗಲಿದೆ. ಯಾವುದೇ ಬದಲಾವಣೆ ಇರುವುದಿಲ್ಲ

ರಾಜ್ಯದಲ್ಲಿ ಜೂನ್‌ 14ರ ವರೆಗೆ ಲಾಕ್‌ಡೌನ್‌ ವಿಸ್ತರಣೆ

ಕೆಲವೇ ಕ್ಷಣಗಳಲ್ಲಿ ಸುದ್ದಿ ಗೋಷ್ಠಿ ಆರಂಭವಾಗಲಿದೆ

ಕೋವಿಡ್‌ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸುದ್ದಿಗೋಷ್ಠಿಗೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.