ADVERTISEMENT

14.84 ಲಕ್ಷ ಎಪಿಎಲ್‌ ಚೀಟಿದಾರರಿಗೂ ಅಕ್ಕಿ: ಸಚಿವ ಕೆ.ಗೋಪಾಲಯ್ಯ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 1:55 IST
Last Updated 19 ಏಪ್ರಿಲ್ 2020, 1:55 IST
ಕೆ.ಗೋಪಾಲಯ್ಯ
ಕೆ.ಗೋಪಾಲಯ್ಯ   

ಬೆಂಗಳೂರು: ರಾಜ್ಯದ 20.59 ಲಕ್ಷ ಎಪಿಎಲ್‌ ಪಡಿತರ ಚೀಟಿದಾರರ ಪೈಕಿ, ಅಕ್ಕಿ ಪಡೆಯದೇ ಇರುವ 14.84 ಲಕ್ಷ ಚೀಟಿದಾರರಿಗೂ ತಲಾ 10 ಕೆ.ಜಿ.ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಈ ವಿಷಯ ತಿಳಿಸಿದರು.

‘ಎಪಿಎಲ್‌ ಚೀಟಿದಾರರ ಪೈಕಿ 5.74 ಲಕ್ಷ ಚೀಟಿದಾರರು ಮಾತ್ರ ಅಕ್ಕಿ ಪಡೆಯುತ್ತಿದ್ದಾರೆ. ಉಳಿದವರು ಅಕ್ಕಿ ಪಡೆಯುತ್ತಿಲ್ಲ. ಮೇ 1ರಿಂದ ಎರಡು ತಿಂಗಳ ಕಾಲ ಕೆ.ಜಿ.ಗೆ ₹ 15ರಂತೆ ಅಕ್ಕಿ ನೀಡಲಾಗುವುದು. ಒಂದು ಕುಟುಂಬಕ್ಕೆ ಗರಿಷ್ಠ 10 ಕೆ.ಜಿ. ಅಕ್ಕಿ ಸಿಗಲಿದೆ. ಎಪಿಎಲ್‌ಗೆ ಅರ್ಜಿ ಸಲ್ಲಿಸಿ ಚೀಟಿ ಬಾರದೆ ಇರುವ 1.09 ಲಕ್ಷ ಕುಟುಂಬಗಳಿಗೂ ಅಕ್ಕಿ ನೀಡಲಾಗುವುದು’ ಎಂದರು.

ADVERTISEMENT

‘ಕೇಂದ್ರ ಮತ್ತು ರಾಜ್ಯದ ಸರ್ಕಾರಗಳ ವತಿಯಿಂದ ಮೇ 1ರಿಂದ 1.27 ಕೋಟಿ ಬಿಪಿಎಲ್‌ ಚೀಟಿದಾರರಿಗೆ ಮುಂದಿನ ಮೂರು ತಿಂಗಳ ಕಾಲ ಒಬ್ಬೊಬ್ಬ ಸದಸ್ಯರಿಗೆ ತಲಾ 10 ಕೆ.ಜಿ.ಅಕ್ಕಿ, 1 ಕೆ.ಜಿ. ಬೇಳೆ ಉಚಿತವಾಗಿ ಸಿಗಲಿದೆ’ ಎಂದರು.

ಆಹಾರಕ್ಕೆ ಕೊರತೆ ಇಲ್ಲ: ‘ರಾಜ್ಯದಲ್ಲಿ ಎಲ್ಲಿ ಬೇಕಾದರೂ ಬಡವರಿಗೆ ಪಡಿತರ ಆಹಾರ ಕೊಡಲಾಗುವುದು. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವಲಸೆ ಬಂದವರು ಆಧಾರ್‌ ಕಾರ್ಡ್‌ ಸಂಖ್ಯೆ ಹೇಳಿದರೆ ಸಾಕು, ಆಹಾರ ಧಾನ್ಯ ಸಿಗುತ್ತದೆ, ಹೊರ ರಾಜ್ಯಗಳಿಂದ ಬಂದವರಿಗೆ ಸಹ ಈ ಸೌಲಭ್ಯ ಇದೆ. ಹೀಗಾಗಿ ಆಹಾರ ಧಾನ್ಯದ ಚಿಂತೆ ಬಿಡಿ, ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್‌ ದಾಖಲೆಯನ್ನಷ್ಟೇ ಇಟ್ಟುಕೊಂಡಿರಿ’ ಎಂದು ಗೋಪಾಲಯ್ಯ ಹೇಳಿದರು.

‘ಮೇ 1ರಿಂದ ರಾಜ್ಯದ ಎಲ್ಲ 19,800 ನ್ಯಾಯಬೆಲೆ ಅಂಗಡಿಗಳಲ್ಲೂ ಏಕಕಾಲದಲ್ಲಿ ಪಡಿತರ ಸಿಗುವುದರಿಂದ ಜನ ದಟ್ಟಣೆ ಉಂಟಾಗದ ರೀತಿಯಲ್ಲಿ ಅಂತರ ಕಾಯ್ದುಕೊಂಡು ಆಹಾರಧಾನ್ಯ ಪಡೆಯಬೇಕು’ ಎಂದು ಮನವಿ ಮಾಡಿದರು.

ಅಂಕಿ ಅಂಶ

1.33 ಕೋಟಿ

ಆಹಾರ ಧಾನ್ಯ ಪಡೆಯುತ್ತಿರುವ ಬಿಪಿಎಲ್+ಎಪಿಎಲ್‌ ಚೀಚಿದಾರರು

4.52 ಕೋಟಿ

ಆಧಾರ ಧಾನ್ಯ ಪಡೆಯುತ್ತಿರುವ ಫಲಾನುಭವಿಗಳು

₹30.06 ಕೋಟಿ ವೆಚ್ಚ

14.84 ಲಕ್ಷ ಎಪಿಎಲ್‌ ಚೀಟಿದಾರರಿಗೆ ಅಕ್ಕಿ ನೀಡಲು ₹ 30.06 ಕೋಟಿ ವೆಚ್ಚ ತಗುಲಲಿದ್ದು, ಇದಕ್ಕ ಹಣಕಾಸು ಇಲಾಖೆಯ ಅನುಮತಿ ದೊರೆತಿದೆ. ಭಾರತೀಯ ಆಹಾರ ನಿಗಮದಿಂದ ಕೆ.ಜಿ.ಗೆ ₹ 25 ದರದಲ್ಲಿ ಅಕ್ಕಿ ಖರೀದಿಸಿ ₹ 15ಕ್ಕೆ ಚೀಟಿದಾರರಿಗೆ ನೀಡಲಾಗುತ್ತದೆ.

***

ಎಪಿಎಲ್‌ ಚೀಟಿದಾರರೆಲ್ಲ ಅಕ್ಕಿ ಬೇಕು ಎಂದು ಕೇಳಿದರೆ ಎರಡು ತಿಂಗಳ ನಂತರವೂ ಕೆ.ಜಿಗೆ ₹ 15ರ ದರದಲ್ಲಿ ನೀಡಲಾಗುವುದು

-ಕೆ.ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಪುರೈಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.