ADVERTISEMENT

ಲಾಕ್‌ಡೌನ್ ಪರಿಣಾಮ | ಲಾಡ್ಜ್‌ಗಳ ಕಡೆ ಮುಖ ಹಾಕದ ಗ್ರಾಹಕ

ಪರಿಸ್ಥಿತಿ ಸುಧಾರಿಸದಿದ್ದರೆ ಶೇ 80ರಷ್ಟು ಲಾಡ್ಜ್‌ಗಳಿಗೆ ಶಾಶ್ವತ ಬೀಗ

ಗುರು ಪಿ.ಎಸ್‌
Published 12 ಜೂನ್ 2020, 20:00 IST
Last Updated 12 ಜೂನ್ 2020, 20:00 IST
ನೌಫಲ್ ಸಿದ್ದಿಕಿ 
ನೌಫಲ್ ಸಿದ್ದಿಕಿ    

ಬೆಂಗಳೂರು: ಕೊರೊನಾ ಸೋಂಕಿನ ಭಯದಿಂದಾಗಿಲಾಕ್‌ಡೌನ್‌ ಸಡಿಲಿಕೆ ನಂತರವೂ ಲಾಡ್ಜ್‌ಗಳ ವಹಿವಾಟು ಚೇತರಿಸಿಕೊಳ್ಳದೇ ಇರುವುದರಿಂದ ಈ ವಲಯ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದೆ.

ಜೂ. 8ರಿಂದ ಕಾರ್ಯಾರಂಭ ಮಾಡಿದ್ದರೂ ದಿನಕ್ಕೆ ಒಬ್ಬರು–ಇಬ್ಬರು ಗ್ರಾಹಕರು ಬರುತ್ತಿದ್ದಾರೆ. ಇದರಿಂದ ಸಿಗುವ ಬಾಡಿಗೆಯಲ್ಲಿ ವಿದ್ಯುತ್‌ ಶುಲ್ಕ ಕಟ್ಟಲೂ ಆಗುತ್ತಿಲ್ಲ ಎನ್ನುತ್ತಾರೆ ಲಾಡ್ಜ್‌ಗಳ ಮಾಲೀಕರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಮೂರು ತಿಂಗಳು ಲಾಡ್ಜ್‌ಗಳನ್ನು ಸಂಪೂರ್ಣ ಮುಚ್ಚಿದ್ದೆವು. ಈಗಲೂ ಗ್ರಾಹಕರು ಬರುತ್ತಿಲ್ಲ. ತಿಂಗಳಿಗೆ ₹1.25 ಲಕ್ಷ ಬಾಡಿಗೆ ಕಟ್ಟಬೇಕು. ಕೆಲಸಗಾರರ ವೇತನ, ನಿರ್ವಹಣೆ, ವಿದ್ಯುತ್–ನೀರಿನ ಶುಲ್ಕ ಸೇರಿ ತಿಂಗಳಿಗೆ ₹1 ಲಕ್ಷ ಬೇಕು. ಆದರೆ, ನಾಲ್ಕು ದಿನಗಳಲ್ಲಿ ನಾಲ್ವರು ಗ್ರಾಹಕರು ಮಾತ್ರ ಬಂದಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಮಗೆ ಉಳಿಗಾಲವಿಲ್ಲ’ ಎನ್ನುತ್ತಾರೆ ಯಶವಂತಪುರದ ಕಾವೇರಿ ಡಿಲಕ್ಸ್‌ ಲಾಡ್ಜ್‌ನ ಮಾಲೀಕ ನೌಫಲ್‌ ಸಿದ್ದಿಕಿ.

ADVERTISEMENT

‘ಒಂದು ಹಾಸಿಗೆಯ ಕೊಠಡಿಗೆ ₹650, ಎರಡು ಹಾಸಿಗೆಗೆ ₹750 ಬಾಡಿಗೆ ತೆಗೆದುಕೊಳ್ಳುತ್ತಿದ್ದೆವು. ಈಗ ₹500ಗೆ ನೀಡಲೂ ನಾವು ಸಿದ್ಧವಿದ್ದೇವೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ನಡೆಯುತ್ತಿದ್ದವು. ಈಗ ಅದೂ ನಡೆಯುತ್ತಿಲ್ಲ’ ಎಂದರು.

ವಿಶ್ವನಾಥಯ್ಯ

‘ಬೆಂಗಳೂರಿನಲ್ಲಿ ನಮ್ಮ ನಾಲ್ಕು ಲಾಡ್ಜ್‌ಗಳಿವೆ. ಹೋಂಡಾ, ಮಹೇಂದ್ರದಂತಹ ಕಂಪನಿಗಳು ಸಿಬ್ಬಂದಿಗೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೊಡುತ್ತವೆ. ಈ ತರಬೇತಿಗಾಗಿ ನೂರಾರು ನೌಕರರು ಬಂದು ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಬಿಸಿನೆಸ್‌ಗಾಗಿ, ಪ್ರವಾಸಕ್ಕಾಗಿಯೂ ಜನ ಬರುತ್ತಿದ್ದರು. ಈಗ ಶೇ 1ರಷ್ಟು ಗ್ರಾಹಕರೂ ಬರುತ್ತಿಲ್ಲ. ಒಂದು ಲಾಡ್ಜ್‌ಗೆ ತಿಂಗಳಿಗೆ ₹80 ಸಾವಿರದಿಂದ ₹1ಲಕ್ಷದವರೆಗೆ ಖರ್ಚು ಬರುತ್ತಿದ್ದು, ಇದನ್ನು ನಿಭಾಯಿಸುವುದೇ ಸವಾಲಾಗಿದೆ’ ಎನ್ನುತ್ತಾರೆ ಪೀಣ್ಯದ ವಿಶ್ವಾಸ್‌ ಲಾಡ್ಜ್‌ ಮಾಲೀಕ ವಿಶ್ವನಾಥಯ್ಯ.

‘ಬಾದಾಮಿ, ಐಹೊಳೆ, ಪಟ್ಟದಕಲ್ಲು ಸುತ್ತ–ಮುತ್ತ ಪ್ರದೇಶಗಳಿಗೆ ಪ್ರವಾಸಿಗರು ಬರುತ್ತಿದ್ದರು. ನಾಲ್ಕು ದಿನಗಳಿಂದ ಮೂರು ಕೊಠಡಿ ಮಾತ್ರ ನೀಡಲಾಗಿದ್ದು, ₹2,100 ಬಾಡಿಗೆ ಬಂದಿದೆ. ತಾಣ ವೀಕ್ಷಣೆಗೆ ಬಂದವರೂ ಉಳಿದುಕೊಳ್ಳುತ್ತಿಲ್ಲ’ ಎಂದು ಬಾದಾಮಿಯ ಆನಂದ್‌ ಡಿಲಕ್ಸ್ ಲಾಡ್ಜ್‌ನ ಚಂದ್ರಶೇಖರ ಕಚ್ಚಾಟಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.