ADVERTISEMENT

ಹಳ್ಳಿಗಳಲ್ಲಿ ಮತ್ತೆ ದವಸ–ಧಾನ್ಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 21:01 IST
Last Updated 1 ಏಪ್ರಿಲ್ 2020, 21:01 IST
ದವಸ–ಧಾನ್ಯ ವಿನಿಮಯದಲ್ಲಿ ತೊಡಗಿರುವ ಕಲ್ಲೂರು ನಾಗನಹಳ್ಳಿ ಗ್ರಾಮಸ್ಥರು
ದವಸ–ಧಾನ್ಯ ವಿನಿಮಯದಲ್ಲಿ ತೊಡಗಿರುವ ಕಲ್ಲೂರು ನಾಗನಹಳ್ಳಿ ಗ್ರಾಮಸ್ಥರು   

ಮೈಸೂರು: ಲಾಕ್‌ಡೌನ್‌ ಪರಿಣಾಮವಾಗಿ ಹಳ್ಳಿಗಳ ಹಳೆಯ ನೋಟ ಮತ್ತೆ ದಕ್ಕಿದೆ. ಗ್ರಾಮೀಣ ಜನರು ಅಗತ್ಯ ವಸ್ತುಗಳನ್ನು ಹಾಗೂ ದವಸ–ಧಾನ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಮೈಸೂರು ತಾಲ್ಲೂಕಿನ ಕೆಂಚಲಗೂಡು, ಮಂಡಕಳ್ಳಿ, ಕಲ್ಲೂರು ನಾಗನಹಳ್ಳಿಗಳಲ್ಲಿ ರೈತರು ತಾವೇ ಬೆಳೆದ ರಾಗಿ, ಅಕ್ಕಿ, ತೆಂಗಿನಕಾಯಿ, ಇತರ ಧಾನ್ಯ ಹಾಗೂ ತರಕಾರಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಆಹಾರ ಪದಾರ್ಥಗಳಿಗಾಗಿ ಅಂಗಡಿಗಳ ಮುಂದೆ ಗುಂಪುಗೂಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗುತ್ತಿದ್ದಾರೆ.

ಪಕ್ಕದ ಮನೆಯವರಿಗೆ ರಾಗಿನೀಡಿ ಅವರಿಂದ ಅಕ್ಕಿ ಪಡೆಯುವುದು, ಸಾಂಬಾರು ಪದಾರ್ಥಗಳ ವಿನಿಮಯ ಮಾಡಿಕೊಳ್ಳುತ್ತಿರುವುದು, ತಮ್ಮಲ್ಲಿರುವ ಒಂದು ಬಗೆಯ ತರಕಾರಿ ನೀಡಿ ಮತ್ತೊಂದು ತರಕಾರಿ ಪಡೆಯುವುದು ನಡೆಯುತ್ತಿದೆ. ಹೀಗಾಗಿ, ಕೆಲ ಹಳ್ಳಿಗಳ ಜನರು ಆಹಾರ ಪದಾರ್ಥಗಳಿಗಾಗಿ ಗ್ರಾಮಗಳಲ್ಲಿ ಅಂಗಡಿ ಮುಂದೆ ಗುಂಪುಗೂಡುವುದು, ಪೇಟೆಗೆ ಬರುವುದು ತಪ್ಪಿದೆ.

ADVERTISEMENT

‘ಕೊರೊನಾ ಸೋಂಕು ಹರಡದಂತೆ ತಡೆಯಲು ಗ್ರಾಮೀಣ ಭಾಗದ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದ್ದಾರೆ. ಆಹಾರ ಪದಾರ್ಥಗಳಿಗಾಗಿ ಜನರು ಅಲೆಯುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದ ಲಾಕ್‌ಡೌನ್‌ ಉದ್ದೇಶವೇ ಹಳಿ ತಪ್ಪಿದೆ. ಆದರೆ, ಗ್ರಾಮದ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪಕ್ಕದ ಮನೆಯವರಿಂದ ಪಡೆಯುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಇದ್ದ ವಾತಾವರಣ ಮರುಕಳಿಸಿದೆ’ ಎಂದು ರೈತ ಮುಖಂಡ ಮರಂಕಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಇಷ್ಟೇ ಅಲ್ಲ. ಹಣಕಾಸಿನ ಮುಗ್ಗಟ್ಟಿನಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಉಚಿತವಾಗಿ ದವಸ ಧಾನ್ಯ ನೀಡುತ್ತಿದ್ದಾರೆ. ಕೆಲವರು ಸಾಲದ ರೂಪದಲ್ಲಿ ಆಹಾರ ಪದಾರ್ಥ ಕೊಡುತ್ತಿದ್ದಾರೆ. ಈ ಮೂಲಕ ಪರಸ್ಪರ ನೆರವು ಕಲ್ಪಿಸಿಕೊಂಡು ಲಾಕ್‌ಡೌನ್‌ ದಿನಗಳನ್ನು ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.