ADVERTISEMENT

ಏಪ್ರಿಲ್‌ 30ರವರೆಗೆ ಲಾಕ್‌ಡೌನ್‌ ನಿಶ್ಚಿತ: ಸಿಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 11:00 IST
Last Updated 11 ಏಪ್ರಿಲ್ 2020, 11:00 IST
   

ಬೆಂಗಳೂರು: ರಾಜ್ಯದಲ್ಲಿ ಏ.30ರವರೆಗೆ ಲಾಕ್ ಡೌನ್ ನಿಶ್ಚಿತವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ 2– 3 ದಿನಗಗಳಲ್ಲಿ ಮಾರ್ಗಸೂಚಿ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜೊತೆ ಶನಿವಾರ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 15 ದಿನ ಲಾಕ್‌ಡೌನ್‌ ವಿಭಿನ್ನವಾಗಿ ಇರಲಿದೆ. ಆದರೆ ಅದನ್ನು ಪಾಲಿಸುವ ವಿಷಯದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಚಟುವಟಿಕೆಗೆ ಅನುಕೂಲವಾಗುವಂತೆ ಕೆಲವು ವಿನಾಯಿತಿ ನೀಡುವ ಬಗ್ಗೆ ಪ್ರಧಾನಿ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳನ್ನು ಸದ್ಯ ಮುಚ್ಚಲಾಗಿದ್ದು. ಭಾಗಶಃ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಲಿದೆ ಎಂದೂ ಯಡಿಯೂರಪ್ಪ ಹೇಳಿದರು.

ADVERTISEMENT

ಪ್ರಧಾನ ಮಂತ್ರಿ ನಾಲ್ಕು ಗಂಟೆ ಕಾಲ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಆಯಾ ರಾಜ್ಯಗಳ ಸ್ಥಿತಿಗತಿ ಬಗ್ಗೆ ತಿಳಿದುಕೊಂಡಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಮತ್ತು ಸಮುದಾಯದಲ್ಲಿ ಹರಡುವ ಕುರಿತು ಕಳವಳ ವ್ಯಕ್ತಪಡಿಸಿದರು ಎಂದರು.

ಕೃಷಿ, ಕೈಗಾರಿಕೆ, ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಕೂಲ ಕಲ್ಪಿಸುವ ಜತೆಗೆ ಸರ್ಕಾರಿ ಕಚೇರಿಗಳನ್ನು ಭಾಗಶಃ ಆರಂಭಿಸಲು ಅನುಮತಿ ನೀಡಲಾಗುವುದು.

ಪ್ರಮುಖವಾಗಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಪ್ರಧಾನಿ ಎಚ್ಚರ ವಹಿಸಲು ಸೂಚಿಸಿದ್ದಾರೆ. 2.84 ಲಕ್ಷ ಪಿಪಿಇ ಕಿಟ್ ಹಾಗೂ ಎರಡು ದಿನಕ್ಕೊಮ್ಮೆ 29 ಲಕ್ಷ ಮಾಸ್ಕ್ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ದೇಶದಾದ್ಯಂತ ಇದುವರೆಗೆ ಕೊರೊನಾ ಸೋಂಕು ಪತ್ತೆಗೆ 220 ಲ್ಯಾಬ್ ಗಳಿದ್ದು ಏಪ್ರಿಲ್ ಅಂತ್ಯಕ್ಕೆ 300 ಲ್ಯಾಬ್ ಆರಂಭಿಸುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ.

ಕೃಷಿಕರಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಮೀನುಗಾರರಿಗೂ ಸಹ ವಿನಾಯಿತಿ ನೀಡಲಾಗಿದೆ. ಕೊರೊನಾ ವಿರುದ್ಧ ಅವಿರತ ದುಡಿಯುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ವಿರುದ್ದ ದೌರ್ಜನ್ಯ ನಡೆದರೆ ಕಠಿಣ ಕ್ರಮ ಜರುಗಿಸಲು ಪ್ರಧಾನಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಜತೆಗೆ ಆರೋಗ್ಯ ಸೇತು ಮೊಬೈಲ್ ಅನುಷ್ಟಾನಕ್ಕೆ ಹೆಚ್ವಿನ ಒತ್ತು ನೀಡಲು ಸಲಹೆ ನೀಡಿದ್ದಾರೆ. ಕಾಳಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಮುಂದಿನ ಎರಡು ವಾರಗಳ ಲಾಕ್‌ಡೌನ್‌ ಕಳೆದ ಮೂರು ವಾರಗಳಿಗಿಂತ ಭಿನ್ನವಾಗಿರುತ್ತದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.